ಗೋಲಿಬಾರ್ ನಲ್ಲಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ಭೋಪಾಲ್: ಪ್ರತಿಭಟನಾನಿರತ ಮಧ್ಯಪ್ರದೇಶ ರೈತರ ಮೇಲೆ ಗೋಲಿಬಾರ್ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ 5 ಮಂದಿ ರೈತರು ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಬುಧವಾರ ತಿಳಿದುಬಂದಿದೆ.
ಸಾಲ ಮನ್ನಾ, ಸೂಕ್ತ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಧ್ಯಪ್ರದೇಶದ ರೈತರು ನಡೆಸುತ್ತಿದ್ದ ಪ್ರತಿಭಟನೆ ನಿನ್ನೆ ಹಿಂಸಾರೂಪಕ್ಕೆ ತಿರುಗಿತ್ತು. ಇಂದೋರ್, ಉಜ್ಜಯಿನಿ, ದೇವಾಸ್ ಮತ್ತಿತರೆಡೆ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿತ್ತು.
ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿಗಳು ಹಾರಿಸಿದ್ದ ಗುಂಡಿಗೆ ನಿನ್ನೆಯಷ್ಟೇ ನಾಲ್ವರು ರೈತರು ಮೃತಪಟ್ಟಿದ್ದರು. ಅಲ್ಲದೆ, ಹಲವರು ಗಾಯಗೊಂಡಿದ್ದರು. ಇದೀಗ ಮತ್ತೊಬ್ಬ ರೈತ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಗಾಯಗೊಂಡಿರುವ ರೈತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ರಾಜ್ಯ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತುರ್ತು ಉನ್ನತ ಮಟ್ಟದ ಸಭೆ ಕರೆದಿದ್ದು, ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳ ಬಳಿ ವರದಿ ಪಡೆಯಲಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಸ್ಥರಿಗೆ ತಲಾ ರೂ.1 ಕೋಟಿ ಪರಿಹಾರ ಘೋಷಿಸಿರುವ ಚೌಹಾಣ್ ಅವರು, ಮೃತರ ರೈತರ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹಾಗೂ ಗಾಯಾಳುಗಳಿಗೆ ರೂ.5 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿಲ್ಲ
ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ನಿಂದಲೇ ರೈತರು ಮೃತಪಟ್ಟಿದ್ದಾರೆಂಬ ಆರೋಪವನ್ನು ಹಿರಿಯ ಪೊಲೀಸ್ ಅಧಿಕಾರಿ ಮಧುಕುಮಾರ್ ಅವರು ತಳ್ಳಿಹಾಕಿದ್ದಾರೆ.
ಭದ್ರತಾ ಸಿಬ್ಬಂದಿಗಳಾಗಲೀ ಅಥವಾ ಪೊಲೀಸರಾಗಲೀ ರೈತರ ಮೇಲೆ ಗುಂಡಿನ ದಾಳಿ ನಡೆಸಿಲ್ಲ. ಕೆಲ ಸ್ಥಳೀಯರೇ ಪ್ರತಿಭಟನಾನಿರತ ರೈತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹಿರಿಯ ಅಧಿಕಾರಿ ವಿ. ಮಧುಕುಮಾರ್ ಮಾತನಾಡಿ, ಸ್ಥಳೀಯರು ಪ್ರತಿಭಟನಾನಿರತ ರೈತರೊಂದಿಗೆ ಘರ್ಷಣೆಗಿಳಿದಿದ್ದಾರೆ. ಸ್ಥಳೀಯರೇ ರೈತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಇದೀಗ ತನಿಖೆ ಪ್ರಗತಿಯಲ್ಲಿದ್ದು, ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರವ ವದಂತಿಗಳನ್ನು ನಿಯಂತ್ರಿಸುವ ಸಲುವಾಗಿ ಮಧ್ಯಪ್ರದೇಶದ ಹಲವೆಡೆ ಇಂಟರ್ನೆಟ್ ಸೌಲಭ್ಯಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ರೈತರ ಮೇಲೆ ನಡೆಸಲಾದ ಗೋಲಿಬಾರ್ ನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ರೈತರಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ ರೈತರು ಭಯೋತ್ಪಾದಕರೇ?...ಜಮ್ಮು ಮತ್ತು ಕಾಶ್ಮೀರಕ್ಕಿಂತಲೂ ಮಧ್ಯಪ್ರದೇಶದಲ್ಲಿನ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ ಎಂದು ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ ಅವರು ಹೇಳಿದ್ದಾರೆ.
ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡಿ: ಕಾಂಗ್ರೆಸ್'ಗೆ ನಾಯ್ಡು
ಮಧ್ಯಪ್ರದೇಶ ರಾಜ್ಯ ಶಾಂತಿಯ ದ್ವೀಪವಾಗಿದ್ದು, ರೈತರ ಪ್ರಕರಣವನ್ನು ಅನಗತ್ಯವಾಗಿ ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್'ಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ಮಧ್ಯಪ್ರದೇಶ ಶಾಂತಿಯ ದ್ವೀಪವಾಗಿದ್ದು, ರೈತರು ತಮ್ಮ ಪ್ರತಿಭಟನೆಗಳನ್ನು ಹಿಂಪಡೆಯಬೇಕು ಹಾಗೂ ರೈತರ ಹೆಸರಿನಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನಗಳನ್ನು ಕಾಂಗ್ರೆಸ್ ಮಾಡಬಾರದು ಎಂದು ತಿಳಿಸಿದ್ದಾರೆ.