ಗೋಲಿಬಾರ್ ನಲ್ಲಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ಭೋಪಾಲ್: ಪ್ರತಿಭಟನಾನಿರತ ಮಧ್ಯಪ್ರದೇಶದ ಮಂಡಸೌರ್ ರೈತರ ಮೇಲೆ ಗೋಲಿಬಾರ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ್ದು, ಘಟನೆಯ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
ಪ್ರಧಾನಿ ಸಭೆಯ ನಂತರ, ಮಂಡಸೌರ್ ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಹೆಚ್ಚುವರಿ ಸಿಆರ್ ಪಿಎಫ್ ಮತ್ತು ಆರ್ ಎಎಫ್ ಪಡೆಗಳನ್ನು ಕಳುಹಿಸಲಾಗಿದೆ. ಅಲ್ಲದೆ ಐವರು ರೈತರನ್ನು ಬಲಿ ಪಡೆದ ಗೋಲಿಬಾರ್ ಪ್ರಕರಣದ ಕುರಿತು ವರದಿ ನೀಡುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸೂಚಿಸಲಾಗಿದೆ.
ಹಿಂಸಾಚಾರ ಪೀಡಿತ ಮಂಡಸೌರ್ ಗೆ ಹೆಚ್ಚುವರಿಯಾಗಿ ಆರು ಸಿಆರ್ ಪಿಎಫ್ ಪಡೆಗಳನ್ನು ಕಳುಹಿಸಲಾಗಿದೆ ಮತ್ತು ರೈತರ ಸಾವಿನ ಕುರಿತು ವರದಿ ನೀಡುವಂತೆ ಮಧ್ಯ ಪ್ರದೇಶ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರ ಅಶೋಕ್ ಪ್ರಸಾದ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಹ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಅವರಿಗೆ ಕರೆ ಮಾಡಿ ಮಂಡಸೌರ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವಾರದಿಂದ ಸಾಲ ಮನ್ನಾ, ಸೂಕ್ತ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಧ್ಯಪ್ರದೇಶದ ರೈತರು ನಡೆಸುತ್ತಿದ್ದ ಪ್ರತಿಭಟನೆ ನಿನ್ನೆ ಹಿಂಸಾರೂಪಕ್ಕೆ ತಿರುಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಐವರು ರೈತರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.