ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ರೈತರು
ಭೋಪಾಲ್: ಮಧ್ಯಪ್ರದೇಶದ ಮಂಡಸೌರ್ ನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ 1,100 ಘರ್ಷಣೆ ನಿಗ್ರಹ ಪಡೆಗಳನ್ನು ಕೇಂದ್ರ ಸರ್ಕಾರ ರವಾನೆ ಮಾಡಿದೆ ಎಂದು ಗುರುವಾರ ತಿಳಿದುಬಂದಿದೆ.
ಬೆಳೆಗಳಿಗೆ ಸೂಕ್ತ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಗೆ ಆಗ್ರಹಿಸಿ ಮಧ್ಯಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಘರ್ಷಣೆ ಏರ್ಪಟ್ಟ ಕಾರಣ ಪೊಲೀಸರು ಗೋಲಿಬಾರ್ ನಡೆಸಿದ್ದರು ಎಂದು ಹೇಳಲಾಗುತ್ತಿತ್ತು. ಇದಾದ ಬಳಿಕ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಐವರು ರೈತರು ಮೃತಪಟ್ಟಿದ್ದರು. ಅಲ್ಲದೆ, ಹಲವರಿಗೆ ಗಾಯಗಳಾಗಿತ್ತು.
ಇದಾದ ಬಳಿಕ ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ನಿನ್ನೆ ಕೂಡ ರೈತರು ತೀವ್ರವಾಗಿ ಪ್ರತಿಭಟನೆ ನಡೆಸಿದ್ದರು. ರಸ್ತೆಯಲ್ಲಿದ್ದ ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಅಲ್ಲಿನ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಕೇಂದ್ರ ಗೃಹ ಸಚಿವಾಲಯ ಕೂಡ ಕೂಡಲೇ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅಲ್ಲದೆ, ಶಾಂತಿ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು.
ಶಾಂತಿ ಮರುಸ್ಥಾಪಿಸುವ ಸಲುವಾಗಿ ಈಗಾಗಲೇ ಕೇಂದ್ರ ಸರ್ಕಾರ 600 ಆಕ್ಷನ್ ಫೋರ್ಸ್, ಘರ್ಷಣೆ ನಿಗ್ರಹ ವಿಶೇಷ ಪಡೆಗಳನ್ನು ರವಾನಿಸಿದ್ದು, ಭದ್ರತಾಪಡೆಗಳು ಮಂಡಸೌರ್ ತಲುಪಿದೆ ಎಂದು ತಿಳಿದುಬಂದಿದೆ.
ಮಂಡಸೌರ್ ಜಿಲ್ಲಾಧಿಕಾರಿ, ಎಸ್'ಪಿ ವರ್ಗಾವಣೆ
ರೈತರ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಮಧ್ಯಪ್ರದೇಶದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಮಂಡಸೌರ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರನ್ನು ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ.
ಮಂಡಸೌರ್ ಜಿಲ್ಲಾಧಿಕಾರಿ ಸ್ವತಂತ್ರ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸ್ಥಾನಕ್ಕೆ ಒ.ಪಿ. ಶ್ರೀವಾತ್ಸವ ಅವರನ್ನು ನೇಮಿಸಿದೆ. ಅಲ್ಲದೆ, ಮಂಡಸೌರ್ ಜಿಲ್ಲಾ ಪೊಲೀಸ್ ಅಧೀಕ್ಷಕ ಒ.ಪಿ.ತ್ರಿಪಾಠಿಯವನ್ನು ವರ್ಗಾವಣೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಇದೇ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮಂಡಸೌರ್ ಗೆ ಭೇಟಿ ನೀಡುತ್ತಿದ್ದಾರೆಂದು ಹೇಳಲಾಗುತ್ತಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್'ಪಿ ಮನೋಜ್ ಕುಮಾರ್ ಅವರು, ರಾಹುಲ್ ಗಾಂಧಿಯವರಿಗೆ ಯಾವುದೇ ಕಾರಣಕ್ಕೂ ಮಂಡಸೌರ್ ಗೆ ಭೇಟಿ ನೀಡಲು ಅನುಮತಿ ನೀಡಲಾಗುವುದಿಲ್ಲ ಎಂದಿದ್ದಾರೆ.