ಮಂಡಸೌರ್: ಕೇಂದ್ರ ಸರ್ಕಾರ ಹಿಂಸಾಚಾರ ಪೀಡಿತ ಮಧ್ಯಪ್ರದೇಶದ ಮಂಡಸೌರ್ ಗೆ ಘರ್ಷಣೆ ನಿಗ್ರಹ ಪಡೆ ರವಾನಿಸಿದ ನಂತರ ಗುರುವಾರ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಆದರೂ ಬೂದಿ ಮುಂಚಿದ ಕೆಂಡದಂತಿದ್ದು, ಮತ್ತೆ ಯಾವುದೇ ಕ್ಷಣದಲ್ಲೂ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಐವರು ರೈತರು ಪೊಲೀಸರ ಗೋಲಿಬಾರ್ ಬಲಿಯಾದ ನಂತರ ರೈತರ ಪ್ರತಿಭಟನೆ ಮತ್ತಷ್ಟು ಹಿಂಸಾರೂಪಕ್ಕೆ ತಿರುಗಿದ್ದರಿಂದ ನಿನ್ನೆಯಿಂದ ಮಂಡಸೌರ್ ನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಆದರೆ ಇಂದು ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಂಜೆ 4ಗಂಟೆಯಿಂದ ಕರ್ಫ್ಯೂ ತೆರವುಗೊಳಿಸಲಾಗಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಇನ್ನೂ ಉದ್ವಿಗ್ನ ಪರಿಸ್ಥಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಗೋಲಿಬಾರ್ ನಲ್ಲಿ ಮೃತಪಟ್ಟ ರೈತರ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ನೀಮಚ್ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಜಿಲ್ಲಾಡಳಿತದೊಂದಿಗೆ ತೀವ್ರ ವಾಗ್ವಾದದ ನಂತರ ಮೃತ ರೈತರ ಕುಟುಂಬವನ್ನು ಭೇಟಿ ಮಾಡಲು ರಾಹುಲ್ ಗಾಂಧಿಗೆ ಅವಕಾಶ ನೀಡಲಾಯಿತು.
ನಿನ್ನೆಯೇ ಘಟನಾ ಸ್ಥಳಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿಯವರನ್ನು ತಡೆಯಲಾಗಿತ್ತು. ಆದರೂ ತಮ್ಮ ಪ್ರಯತ್ನವನ್ನು ಮುಂದುವರೆಸಿದ ರಾಹುಲ್ ಗಾಂಧಿಯವರು ಮತ್ತೊಮ್ಮೆ ಮಂಡಸೌರ್ ಗೆ ಭೇಟಿ ನೀಡಲು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಈ ವೇಳೆ ನೀಮಚ್ ಬಳಿ ಮಧ್ಯಪ್ರದೇಶ ಪೊಲೀಸರು ರಾಹುಲ್ ರನ್ನು ವಶಕ್ಕೆ ಪಡೆದುಕೊಂಡರು.
ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿಯವರು ರೈತರ ಸಾಲವನ್ನು ಮನ್ನಾ ಮಾಡುತ್ತಿಲ್ಲ, ಬೋನಸ್ ಅನ್ನೂ ನೀಡುತ್ತಿಲ್ಲ. ರೈತರಿಗೆ ಕೇವಲ ಗುಂಡುಗಳನ್ನು (ಬುಲೆಟ್ಸ್) ಮಾತ್ರ ನೀಡುತ್ತಿದ್ದಾರೆಂದು ಆರೋಪಿಸಿದರು.
ಮೋದಿ ಶ್ರೀಮಂತರ ಸಾಲವನ್ನು ಮಾತ್ರ ಮನ್ನಾ ಮಾಡುತ್ತಾರೆ. ಆದರೆ, ರೈತರ ಸಾಲ ಮಾತ್ರ ಮನ್ನಾ ಮಾಡುತ್ತಿಲ್ಲ. ಯಾವುದೇ ಕಾರಣಗಳನ್ನು ನೀಡದೆಯೇ ನನ್ನನ್ನು ಬಂಧಿಸಿದ್ದಾರೆ. ಉತ್ತರಪ್ರದೇಶದಲ್ಲಿ ಇದೇ ರೀತಿ ಮಾಡಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.