ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ಮುಂಬೈ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಊಹಿಸಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಕೇಂದ್ರದ ಎನ್ ಡಿಎ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ತಮ್ಮ ಕಚೇರಿಯಲ್ಲಿ ಮಾತನಾಡಿರುವ ಅವರು, ಅಂದು ನಾನು ಪಕ್ಷದ ಅಧ್ಯಕ್ಷನಾಗಿದ್ದೆತ. ನರೇಂದ್ರ ಮೋದಿಯವರು ಪ್ರಚಾರದ ಮುಖ್ಯಸ್ಥರಾಗಿದ್ದರು. ಪ್ರಚಾರದ ವೇಳೆ ಜನರ ಪ್ರತಿಕ್ರಿಯೆ ಹಾಗೂ ಅಭಿಪ್ರಾಯಗಳ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೆವು. ಬಿಜೆಪಿ ಸರಿಯಾದ ನಡೆಯಲ್ಲಿ ನಡೆಯುತ್ತಿದ್ದು ನ್ಯಾಯಯುತವಾಗಿ ಸ್ಪರ್ಧಿಸಿ, ಇತರೆ ಪಕ್ಷಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ನಾವು ಊಹಿಸಿದ್ದೆವು.
ಪ್ರಚಾರ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಚುನಾವಣೆ ಬಗ್ಗೆ ಮೋದಿಯವರ ಅಂದಾಜು ಏನಿರಬಹುದು ಎಂದು ಕೇಳಿದ್ದೆ, ಈ ವೇಳೆ ಅವರು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು. ಇದು ಅಂದಿನ ನಮ್ಮ ಆಲೋಚನೆಗಳಾಗಿತ್ತು. ನಮ್ಮ ಹಿರಿಯರ ಶ್ರಮ ಎಂದಿಗೂ ವಿಫಲವಾಗಲ್ಲ. ಒಂದಲ್ಲ ಒಂದು ದಿನ ಬಿಜೆಪಿ ವಿಶ್ವದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಲಿದೆ ಎಂದು ನಾವು ನಂಬಿದ್ದೆವು. ಇದೀಗ ಬಿಜೆಪಿಯಲ್ಲಿ 11 ಕೋಟಿ ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರ ಸರ್ಕಾರ ನಡೆಸಲು ಸಾಧ್ಯ ಎಂಬ ತಿಳುವಳಿಕೆಯನ್ನು ಜನರು ಸುಳ್ಳಾಗಿಸಿದ್ದಾರೆಂದು ತಿಳಿಸಿದ್ದಾರೆ.