ಭೋಪಾಲ್: ಮಂಡಸೌರ್ ರೈತರ ಮೇಲಿನ ಗೋಲಿಬಾರ್ ಪ್ರಕರಣದ ನಂತರ ಮಧ್ಯಪ್ರದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಡೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಕೈಗೊಂಡಿರುವ ಉಪವಾಸ ನಿರಶನ 2 ನೇ ದಿನಕ್ಕೆ ಕಾಲಿಟ್ಟಿದ್ದು, ಎಂದಿಗೂ ರೈತರಿಗಾಗಿ ಉತ್ತಮವಾದುದ್ದನ್ನೇ ಮಾಡಲು ಯತ್ನಿಸಿದ್ದೇನೆ, ರೈತರ ಸಮಸ್ಯೆ ನಮ್ಮ ಸಮಸ್ಯೆಯೂ ಹೌದು ಎಂದು ಶಿವರಾಜ್ ಸಿಂಗ್ ಚೌಹ್ವಾಣ್ ಹೇಳಿದ್ದಾರೆ.
ಗೋಲಿಬಾರ್ ಪ್ರಕರಣದ ನಂತರ ಮಧ್ಯಪ್ರದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಡೆಗೆ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.10 ರಿಂದ ಉಪವಾಸ ನಿರಶನ ಪ್ರಾರಂಭಿಸಿದ್ದಾರೆ. ಉಪವಾಸ ನಿರಶನದ 2 ನೇ ದಿನ ಪತ್ರಕರ್ತರೊಂದಿಗೆ ಮಾತನಾಡಿರುವ ಶಿವರಾಜ್ ಸಿಂಗ್ ಚೌಹ್ವಾಣ್, ರೈತರಿಗಾಗಿ ಉತ್ತ್ತಮವಾದುದ್ದನ್ನೇ ಮಾಡಲು ಯತ್ನಿಸಿದ್ದೇನೆ, ರೈತರ ಸಮಸ್ಯೆ ನಮ್ಮ ಸಮಸ್ಯೆಯೂ ಹೌದು ಎಂದು ಹೇಳಿದ್ದು, ಕೃಷಿಯನ್ನು ಲಾಭದಾಯಕ ಕೆಲಸವನ್ನಾಗಿ ಮಾಡುವುದಕ್ಕೆ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಕೃಷಿಯ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಚೌಹ್ವಾಣ್, ಕಳೆದ ವರ್ಷ ಬೆಳೆ ನಷ್ಟವಾದಾಗ ಪರಿಹಾರ ನೀಡಲು ಕೇಂದ್ರ ಸರ್ಕಾರ ಮಧ್ಯಪ್ರದೇಶಕ್ಕೆ 4,800 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಮಂಡಸೌರ್ ನಲ್ಲಿ ಗಲಭೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, 4 ಪೊಲೀಸ್ ಠಾಣೆಗಳ ಪೈಕಿ 3 ಪೊಲೀಸ್ ಠಾಣೆಗಳಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ.