ಕೋಲ್ಕತಾ: ನ್ಯಾಯಾಂಗ ನಿಂದನೆ ಆರೋಪದಡಿ ಸುಪ್ರೀಂ ಕೋರ್ಟ್ ನಿಂದ ಆರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿ, ತಲೆಮರೆಸಿಕೊಂಡಿರುವ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರು ಸೋಮವಾರ ಸೇವೆಯಿಂದ ನಿವೃತ್ತಿಯಾಗಿದ್ದಾರೆ.
62 ವರ್ಷದ ನ್ಯಾ.ಕರ್ಣನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಕೋಲ್ಕತಾ ಹೈಕೋರ್ಟ್ ಆಡಳಿತ ಮಂಡಳಿ ಇಂದು ನಡೆಯಬೇಕಿದ್ದ ಅವರ ಬೀಳ್ಕೋಡುಗೆ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.
ಬೀಳ್ಕೋಡುಗೆ ಕಾರ್ಯಕ್ರಮ ನಡೆದರೆ ನ್ಯಾಯಾಧೀಶರು, ಹಿರಿಯ ವಕೀಲರು ಹಾಗೂ ಇತರರು ಅವರ ಕುರಿತು ಮಾತನಾಡುತ್ತಿದ್ದರು. ಅನುಪಸ್ಥಿತಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆದಿಲ್ಲ ಎಂದು ಕೋಲ್ಕತಾ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸುಗತೋ ಮುಜಮ್ದಾರ್ ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಉನ್ನತ ನ್ಯಾಯಮೂರ್ತಿಗಳು ಹಾಗೂ ಮದ್ರಾಸ್ ಹೈಕೋರ್ಟ್ ಜಡ್ಜ್ ಗಳ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯಾ.ಕರ್ಣನ್ ಪತ್ರ ಬರೆದಿದ್ದರು. ಈ ಸಂಬಂಧ ನ್ಯಾ.ಕರ್ಣನ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಏಳು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಮೇ 9ರಂದು ಕರ್ಣನ್ ಅವರಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಅಂದಿನಿಂದ ನಾಪತ್ತೆಯಾಗಿರುವ ನ್ಯಾ.ಕರ್ಣನ್ ಅವರು ಇನ್ನು ಪೊಲೀಸರಿಗೆ ಕೈಗೆ ಸಿಕ್ಕಿಲ್ಲ.