ನವದೆಹಲಿ: ಮಂಡಸೌರ್ ಜಿಲ್ಲೆಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಪ್ರಕರಣ ಕುರಿತಂತೆ ಬಿಜೆಪಿ ಮಿತ್ರಪಕ್ಷ ಶಿವಸೇನೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ರೈತರಿಗಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾಡಿದ್ದ ಉಪವಾಸ ಕುರಿತಂತೆ ತನ್ನ ಮುಖಪುಟ ಸಾಮ್ನಾದಲ್ಲಿ ವ್ಯಂಗ್ಯವಾಡಿರುವ ಶಿವಸೇನೆ, ಚೌಹಾಣ್ ಮೊದಲು ರೈತರಿಗೆ ಗುಂಡಿಟ್ಟು. ನಂತರ ಉಪವಾಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಶಿವರಾಜ್ ಸಿಂಗ್ ಚೌಹಾಣ್, ಸಿಎಂ ಕೇಜ್ರಿವಾಲ್ ಅವರ ವಿಚಾರದಲ್ಲಿ ಬಿಜೆಪಿ ದ್ವಿಮುಖ ಧೋರಣೆಯನ್ನು ಅನುಸರಿಸುತ್ತಿದೆ. ಕೇಜ್ರಿವಾಲ್'ಗೆ ಅನ್ವಯಿಸುವ ನಿಯಮಗಳು ಚೌಹಾಣ್ ಗೂ ಅನ್ವಯಿಸಬೇಕು. ಗಾಂಧೀಜಿಯವರ ಸಿದ್ಧಾಂತಗಳನ್ನು ಅನುಸರಿಸಿದರೆ, ಸಮಸ್ಯೆಗಳು ಪರಿಹಾರವಾಗುತ್ತವೆಯೇ? ಜೌಹಾಣ್ ಮೊದಲು ರೈತರಿಗೆ ಗುಂಡಿಟ್ಟು, ನಂತರ ಉಪವಾಸ ಮಾಡಿದರು ಎಂದು ಸೇನೆ ಹೇಳಿಕೊಂಡಿದೆ.
ಕೆಲ ದಿನಗಳ ಹಿಂದಷ್ಟೇ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾಕ ಬಿಜೆಪಿ ಟೀಕೆ ಮಾಡಿತ್ತು. ಪ್ರತಿಭಟನೆ ನಡೆಸುವ ಬದಲು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಜ್ರಿವಾಲ್ ಗೆ ಸಲಹೆ ಮಾಡಿತ್ತು. ಬಿಜೆಪಿಯ ವರ್ತನೆಯನ್ನು ಇದೀಗ ನೆನಪಿಸಿರುವ ಶಿವಸೇನೆ ಕೇಂದ್ರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಹೇಳಿಕೊಂಡಿದೆ.
ರೈತರ ಮೇಲಿನ ಗೋಲಿಬಾರ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಂಸೆಯಿಂದ ನೊಂದಿರುವುದಾಗಿ ಹೇಳಿದ್ದ ಚೌಹಾಣ್ ಅವರು, ಶನಿವಾರ ಬೆಳಿಗ್ಗೆ 11 ಗಂಟೆಗೆ ಭೋಪಾಲ್ ನ ದಸರಾ ಮೈದಾನದಲ್ಲಿ ಉಪವಾಸ ಆರಂಭಿಸಿದ್ದರು. ಭಾನುವಾಹ ಮಧ್ಯಾಹ್ನ 3.30ರ ಸುಮಾರಿಗೆ ಮಾಜಿ ಮುಖ್ಯಮಂತ್ರಿ ಕೈಲಾಶ ಜೋಶಿ ಅವರು ಚೌಹಾಣ್ ಗೆ ಎಳನೀರು ಕುಡಿಸುವ ಮೂಲಕ ಉಪವಾಸಕ್ಕೆ ಮಂಗಳ ಹಾಡಿದ್ದರು.