ಇಂದೋರ್: ಮಧ್ಯಪ್ರದೇಶ ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟ ಹಿಂಸಾಚಾರ ಪೀಡಿತ ಮಂಡಸೌರ್ ಜಿಲ್ಲೆಯ ರೈತನನ್ನು ಹುತಾತ್ಮ ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದ ಬಂಧುಗಳು, ಸರ್ಕಾರ ಮಣಿಯದೇ ಇದ್ದಾಗ ಮೃತ ರೈತನ ದೇಹಕ್ಕೆ ಅಂತಿಮ ಸಂಸ್ಕಾರದ ವೇಳೆ ರಾಷ್ಟ್ರಧ್ವಜ ಹೊದಿಸಿರುವ ಘಟನೆ ನಡೆದಿದೆ.
ಮೃತ ರೈತನನ್ನು ಘನಶ್ಯಾಮ ಧಕಡ್ ಎಂದು ಹೇಳಲಾಗುತ್ತಿದೆ. ಸರ್ಕಾರಿ ಗೌರವಗಳೊಂದಿಗೆ ಗಣ್ಯರು, ಯೋಧರ ಅಂತ್ಯಕ್ರಿಯೆ ನಡೆಸುವಾಗ ಮಾತ್ರ ರಾಷ್ಟ್ರಧ್ವಜವನ್ನು ಕಳೇಬರದ ಮೇಲೆ ಹೊದಿಸಲಾಗುತ್ತದೆ.
ರೈತನ ಮೃತದೇಹಕ್ಕೆ ರಾಷ್ಟ್ರಧ್ವಜ ಹೊದಿಸಿದ್ದೇ ಆದರೆ, ಅದು ರಾಷ್ಟ್ರಧ್ವಜ ಸಂಹಿತೆಯ ಉಲ್ಲಂಘನೆಯಾಗಲಿದೆ. ನಾನು ಸ್ಥಳಕ್ಕೆ ಹೋದಾಗ ರೈತನ ಮೃತ ದೇಹದ ಮೇಲೆ ಹೊದಿಕೆ ಮಾತ್ರ ಇತ್ತು. ಅಂತ್ಯಸಂಸ್ಕಾರದ ಅಂತಿಮ ಸಮಯದ ವೇಳೆ ನಾನು ಸ್ಥಳದಲ್ಲಿರಲಿಲ್ಲ. ರಾಷ್ಟ್ರಧ್ವಜಕ್ಕೆ ಅವಮಾನವಾಗುವುದಕ್ಕೆ ನಾವು ಬಿಡುವುದಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಮಂಡಸೌರ್ ಜಿಲ್ಲಾಧಿಕಾರಿ ಒಪಿ. ಶ್ರೀವಾತ್ಸವ ಅವರು ಹೇಳಿದ್ದಾರೆ.
ಆದರೆ, ರೈತನಿಗೆ ರಾಷ್ಟ್ರಧ್ವಜ ಹೊದಿಸಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಟೀಕೆ, ವಿರೋಧಗಳು ವ್ಯಕ್ತವಾಗತೊಡಗಿವೆ.