ನವದೆಹಲಿ: ನೀಟ್ ಪರೀಕ್ಷಾ ಫಲಿತಾಂಶದ ಕುರಿತಂತೆ ಉಂಟಾಗಿದ್ದ ಗೊಂದಲಗಳು ಇದೀಗ ನಿವಾರಣೆಯಾಗಿದ್ದು, ಈ ಹಿಂದೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿರುವ ಸುಪ್ರೀಕೋರ್ಟ್ ಕೂಡಲೇ ಫಲಿತಾಂಶ ಪ್ರಕಟಿಸುವಂತೆ ಸಿಬಿಎಸ್ಇಗೆ ಸೋಮವಾರ ಆದೇಶಿಸಿದೆ.
ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲವಿತ್ತು ಎಂಬ ಕಾರಣಕ್ಕೆ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸುಗಳ ನೀಟ್ ಫಲಿತಾಂಶಕ್ಕೆ ಮದ್ರಾಸ್ ಹೈಕೋರ್ಟ್ ಈ ಹಿಂದೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಎಸ್ಇ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಇದರಂತೆ ಇಂದು ವಿಚಾರಣೆ ನಡೆಸಿಲುವ ಸುಪ್ರೀಂಕೋರ್ಟ್, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಫಲಿತಾಂಶಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ಗೆ ಅಧಿಕಾರವಿಲ್ಲ ಎಂದು ಹೇಳಿದೆ, ಅಲ್ಲದೆ, ನೀಟ್ ಪರೀಕ್ಷಾ ಫಲಿತಾಂಶವನ್ನು ಕೂಡಲೇ ಪ್ರಕಟ ಮಾಡಿ, ನಂತರ ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ಪ್ರವೇಶ ಪ್ರಕ್ರಿಯೆಯನ್ನು ಈ ಮೊದಲು ನಿಗದಿಯಾಗಿದ್ದ ವೇಳಾಪಟ್ಟಿಗೆ ಅನುಗುಣವಾಗಿ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಮೂಲಕ ನೀಟ್ ಪರೀಕ್ಷಾ ಫಲಿತಾಂಶಗಳ ಪ್ರಕಟಣೆಯ ಮಾರ್ಗವನ್ನು ಸುಗಮಗೊಳಿಸಿದೆ.
ಎಲ್ಲಾ ಪ್ರಕ್ರಿಯೆಗಳೂ ಪ್ರಸ್ತುತ ತನ್ನ ಮುಂದೆ ಬಾಕಿಯಿರುವ ನೀಟ್ ವಿಷಯದ ಮೇಲಿನ ತನ್ನ ಅಂತಿಮ ನಿರ್ಧಾರ ಪ್ರಕಟಣೆಗೆ ಒಳಪಟ್ಟಿಸುತ್ತದೆ ಎಂದು ನ್ಯಾಯಾಧೀಶರಾದ ಪಿ.ಸಿ.ಪಂತ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ರಜಾಕಾಲದ ಪೀಠ ಸ್ಪಷ್ಟಪಡಿಸಿದೆ. ಇದೇ ವೇಳೆ 2017ರ ನೀಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅರ್ಜಿಗಳನ್ನು ವಿಚಾರಣೆಗೆತ್ತಿಕೊಳ್ಳದಂತೆ ಎಲ್ಲಾ ಹೈಕೋರ್ಟ್ ಗಳಿಗೂ ಸೂಪ್ರೀಂ ಸೂಚಿಸಿದೆ.