ದೇಶ

ಜಮ್ಮು-ಕಾಶ್ಮೀರದಲ್ಲಿ ಸರಣಿ ಉಗ್ರರ ದಾಳಿ: ಹೊಣೆ ಹೊತ್ತುಕೊಂಡ ಪಾಕ್ ಮೂಲದ ಉಗ್ರ ಸಂಘಟನೆ

Manjula VN
ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಮಂಗಳವಾರ ಉಗ್ರರು ಸರಣಿ ದಾಳಿ ನಡೆಸಿದ್ದು, ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯೊಂದು ಹೊತ್ತುಕೊಂಡಿದೆ. 
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸಿಆರ್'ಪಿಎಫ್ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರರು, ಗುಂಡಿನ ದಾಳಿ ನಡೆಸಿ 10 ಯೋಧರು ಗಾಯಗೊಳ್ಳುವಂತೆ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದರು. 
ಇದಾದ ಬಳಿಕ ಅನಂತ್ ನಾಗ್ ಜಿಲ್ಲೆಯ ಅಂಚಿದೋರಾ ಎಂಬ ಪ್ರದೇಶದಲ್ಲಿರುವ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದ ಉಗ್ರರು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಗಳ ಬಳಿಯಿದ್ದ 4 ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. 
ನಂತರ ಪುಲ್ವಾಮ ಜಿಲ್ಲೆಯ ಪದ್ಗಂಪೋರಾದಲ್ಲಿರುವ ಸಿಆರ್ ಪಿಎಫ್ ಶಿಬಿರದ ಬಳಿ ಬಂದಿರುವ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಪೇದೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರಂತೆ ಕೇವಲ 24 ಗಂಟೆಗಳಲ್ಲಿ ಉಗ್ರರು 3 ಕಡೆ ದಾಳಿ ನಡೆಸಿದ್ದು, ಗಡಿ ಪ್ರದೇಶದಲ್ಲಿರುವ ಜನರ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 
ಸೋಮವಾರ ಕೂಡ ಪುಲ್ವಾಮ ಜಿಲ್ಲೆಯ ಸಿಆರ್'ಪಿಎಫ್ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿ ಪರಾರಿಯಾಗಿದ್ದರು. ಹೀಗಾಗಿ ತಪ್ಪಿಸಿಕೊಂಡಿರುವ ಉಗ್ರರು ಮಂಗಳವಾರ ಮತ್ತೆ ದಾಳಿ ನಡೆಸುವ ಸಾಧ್ಯಗಳಿವೆ ಎಂದು ಭದ್ರತಾ ಸಂಸ್ಥೆಗಳು ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಇದರಂತೆ ನಿನ್ನೆ ಉಗ್ರರು ವಿವಿಧೆಡೆ ಸರಣಿ ದಾಳಿಗಳನ್ನು ನಡೆಸಿದ್ದು, ಈಗಾಗಲೇ ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ನಿನ್ನೆ ಕಾಶ್ಮೀರದಲ್ಲಿ ನಡೆಸಲಾಗಿರುವ ಉಗ್ರರ ಸರಣಿ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಅಲ್-ಉಮರ್-ಮುಜಾಹಿದ್ದೀನ್ ಮತ್ತು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗಳು ಹೊತ್ತುಕೊಂಡಿದ್ದು, ಸರಣಿ ದಾಳಿ ನಡೆಸಿದ್ದು ನಾವೇ ಎಂದು ಹೇಳಿಕೊಂಡಿದೆ.
SCROLL FOR NEXT