ದೇಶ

ಗೂರ್ಖಾ ಜನಮುಕ್ತಿ ಮೋರ್ಚಾ ಕಚೇರಿ ಆವರಣದಲ್ಲಿ ಪೊಲೀಸರ ದಾಳಿ: ಡಾರ್ಜಿಲಿಂಗ್ ನಲ್ಲಿ ಹಿಂಸಾಚಾರ

Sumana Upadhyaya
ಡಾರ್ಜಿಲಿಂಗ್: ಗೂರ್ಖಾ ಜನಮುಕ್ತಿ ಮೋರ್ಚಾದ ಕಾರ್ಯಕರ್ತರು ತಮ್ಮ ಪಕ್ಷದ ಕೇಂದ್ರ ಕಚೇರಿ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಪೊಲೀಸ್ ವಾಹನಕ್ಕೆ ಬೆಂಕಿ ಇಟ್ಟದ್ದರಿಂದ ಡಾರ್ಜಿಲಿಂಗ್ ನಲ್ಲಿ ಇಂದು ಬೆಳಗ್ಗೆ ಹಿಂಸಾಚಾರ ಉಂಟಾಯಿತು.
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾದ್ದರಿಂದ ಇದೀಗ ಪಟ್ಲಬಾಶ್ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.ಅಲ್ಲಲ್ಲಿ ಕಲ್ಲು ತೂರಾಟ, ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.
ಗೂರ್ಖಾ ಜನಮುಕ್ತಿ ಮೋರ್ಚಾದ ಮುಖ್ಯಸ್ಥ ಬಿಮಲ್ ಗುರುಂಗ್ ಅವರ ಕಚೇರಿ ಮೇಲೆ ನಡೆದ ದಾಳಿ ಸಂದರ್ಭದಲ್ಲಿ 300ರಿಂದ 400 ಶಸ್ತ್ರಾಸ್ತ್ರಗಳನ್ನು, ಬಾಣಗಳು, ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಾರ್ಜಿಲಿಂಗ್ ಪರ್ವತ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಬಂದ್ ಗೆ ಪ್ರತ್ಯೇಕತಾವಾದಿಗಳ ಗುಂಪು ಕರೆ ನೀಡಿದೆ.
ಸಿಂಗ್ಮಾರಿ ಮತ್ತು ಪಟ್ಲೆಬಾಸ್ ನಲ್ಲಿ ನಡೆದ ದಾಳಿಯಲ್ಲಿ ಕೆಲವು ಪಕ್ಷದ ಕಾರ್ಯಕರ್ತರು ಕೂಡ ಬಂಧಿಸಲ್ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಗೋರ್ಖಲ್ಯಾಂಡ್ ರಾಜ್ಯ ರಚನೆಗೆ ಒತ್ತಾಯಿಸಿ ತಮ್ಮ ಗುಂಪು ಅಭಿಯಾನ ನಡೆಸಲಿದ್ದು, ಗುರಿ ಈಡೇರುವವರೆಗೆ ಹೋರಾಟ ಮುಂದುವರೆಸುವುದಾಗಿ ಗುರುಂಗ್ ಘೋಷಿಸಿದ ಒಂದು ದಿನದ ನಂತರ ಈ ಬೆಳವಣಿಗೆಯುಂಟಾಗಿದೆ. ಭಾರತದ ಖ್ಯಾತ ಚಹಾ ಬೆಳೆಯುವ ಪ್ರದೇಶವಾದ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಗೆ ಭೇಟಿ ನೀಡದಂತೆ ಪ್ರವಾಸಿಗರಿಗೆ ಅವರು ಕರೆ ನೀಡಿದ್ದಾರೆ.
ಗುರುಂಗ್ ಮತ್ತು ಇತರ ಕೆಲವು ಕಾರ್ಯಕರ್ತರ ಕಚೇರಿ ಆವರಣದ ಮೇಲೆ ದಾಳಿ ನಡೆಸಲಾಗಿದೆ. ಮೂಲ ಮಾಹಿತಿ ಆಧಾರದ ಮೇರೆಗೆ ನಾವು ದಾಳಿ ನಡೆಸಿದ್ದೇವೆ. ಇನ್ನೂ ದಾಳಿ ನಡೆಯುತ್ತಿದೆ. ನಾವು ಕೆಲವು ಜಿಜೆಎಂ ಕಾರ್ಯಕರ್ತರನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಗುರುಂಗ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂಬ ವದಂತಿಯನ್ನು ಪೊಲೀಸರು ನಿರಾಕರಿಸಿದ್ದಾರೆ.
 ಪೊಲೀಸರ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಜೆಎಂ ಮುಖಂಡ, ಅವರಿಗೆ ಏನು ಸಿಕ್ಕಿದೆ? ಖುರ್ಕಿ ನಮ್ಮ ಸಂಪ್ರದಾಯದ ಭಾಗ. ಅದನ್ನು ನಮ್ಮ  ಬಳಿ ಇಟ್ಟುಕೊಂಡರೆ ನಷ್ಟವೇನು? ಬಿಲ್ಲು ಮತ್ತು ಬಾಣಗಳು ಸಾಂಪ್ರದಾಯಿಕ ಆಯುಧಗಳಾಗಿವೆ. ವಿದ್ಯಾರ್ಥಿಗಳ ಬಿಲ್ಲುಗಾರಿಕೆ ಸ್ಪರ್ಧೆಗೆ ಅವುಗಳನ್ನು ಇಡಲಾಗಿದೆ ಎಂದು ಹೇಳಿದರು.
SCROLL FOR NEXT