ನವದೆಹಲಿ: ಜೂ.24 ರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಸುತ್ತಿನ ವಿದೇಶ ಪ್ರವಾಸ ಕೈಗೊಳ್ಳಲಿದ್ದು, ನೆದರ್ಲ್ಯಾಂಡ್, ಪೋರ್ಚುಗಲ್, ಅಮೆರಿಕಾಗೆ ಭೇಟಿ ನೀಡಲಿದ್ದಾರೆ.
ವ್ಯಾಪಾರ ಮತ್ತು ಭದ್ರತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಈ ಮೂರು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ವಿದೇಶಾಂಗ ಇಲಾಖೆಯ ವಕ್ತಾರ ಗೋಪಾಲ್ ಬಗ್ಲೆ, ಜೂ.24 ರಂದು ಪೋರ್ಚುಗಲ್ ಗೆ, ಜೂ.25, 26 ರಂದು ಅಮೆರಿಕಾಗೆ, ಜೂ.27 ರಂದು ನೆದರ್ಲ್ಯಾಂಡ್ ಪ್ರವಾಸದಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರಾದೇಶಿಕ ಭದ್ರತಾ ಸ್ಥಿತಿ ಹಾಗೂ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಹಕಾರದ ಮಹತ್ವದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಅಲ್ಲಿನ ಉದ್ಯಮಿಗಳನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ ಎಂದು ಗೋಪಾಲ್ ಬಗ್ಲೆ ಹೇಳಿದ್ದಾರೆ.