ಮೋದಿ ಅಮೆರಿಕಾ ಪ್ರವಾಸ: ಪ್ರಿಡೇಟರ್ ಡ್ರೋನ್ ಖರೀದಿ ಒಪ್ಪಂದಕ್ಕೆ ಮಹತ್ವ
ಜೂ.25 ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಪ್ರಿಡೇಟರ್ ಡ್ರೋನ್ ಖರೀದಿ ಒಪ್ಪಂದವನ್ನು ಯಶಸ್ವಿಯಾಗಿಸುವುದು ಪ್ರಧಾನಿ ಮೋದಿ ಮುಂದಿರುವ ಸವಾಲಾಗಿದೆ.
ನವದೆಹಲಿ: ಜೂ.25 ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಪ್ರಿಡೇಟರ್ ಡ್ರೋನ್ ಖರೀದಿ ಒಪ್ಪಂದವನ್ನು ಯಶಸ್ವಿಯಾಗಿಸುವುದು ಪ್ರಧಾನಿ ಮೋದಿ ಮುಂದಿರುವ ಸವಾಲಾಗಿದೆ.
ಈ ಹಿಂದೆ ಬರಾಕ್ ಒಬಾಮ ಅಮೆರಿಕ ಅಧ್ಯಕ್ಷರಾಗಿದ್ದಾಗ ಅಮೆರಿಕ ಭಾರತಕ್ಕೆ ಪ್ರೆಡೇಟರ್ ಡ್ರೋನ್ ಪೂರೈಕೆ ಮಾಡುವ ಒಪ್ಪಂದದ ಬಗ್ಗೆ ಮಾತುಕತೆ ನಡೆದಿತ್ತಾದರೂ, ಈಗ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ಭಾರತಕ್ಕೆ ಪ್ರೆಡೇಟರ್ ಡ್ರೋನ್ ಪೂರೈಕೆ ಮಾಡುವ ಯೋಜನೆಗೆ ಹಿನ್ನಡೆಯುಂಟಾಗಿದೆ.
ಅಮೆರಿಕ ಭಾರತಕ್ಕೆ ಪ್ರೆಡೇಟರ್ ಡ್ರೋನ್ ಪೂರೈಕೆ ಮಾಡುವುದು ರಾಜತಾಂತ್ರಿಕ ಲೆಕ್ಕಾಚಾರವಾಗಿದೆ. ಹಿಂದೂ ಮಹಾಸಾಗರದಲ್ಲಿ ಕಣ್ಗಾವಲಿಡುವುದಕ್ಕಾಗಿ ಭಾರತ ಅತ್ಯುನ್ನತ ತಂತ್ರಜ್ಞಾನ ಹೊಂದಿದ್ದ ಬಹು ಉಪಯೋಗಿ 22 ಪ್ರೆಡೇಟರ್ ಡ್ರೋನ್ (ನಿಶ್ಶಸ್ತ್ರ ಡ್ರೋನ್) ನ್ನು ಪಡೆಯಲು ಬಯಸಿತ್ತು. ಇತ್ತ ಹಿಂದೂ ಮಹಾಸಾಗರದಲ್ಲಿ ಚೀನಾ ಸಹ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದು, ಭಾರತಕ್ಕೆ ಪ್ರೆಡೇಟರ್ ಡ್ರೋನ್ ಪೂರೈಕೆಯಾದರೆ ಚೀನಾಗೆ ಸ್ವಲ್ಪ ಮಟ್ಟಿಗಿನ ಹಿನ್ನಡೆಯುಂಟಾಗಲಿದೆ. ಇದೇ ವೇಳೆ ಅಮೆರಿಕಾಗೆ ಉತ್ತರ ಕೊರಿಯಾ ಅಣ್ವಸ್ತ್ರ ಯೋಜನೆಯನ್ನು ನಿಗ್ರಹಿಸಲು ಚೀನಾದ ಸಹಾಯ ಅಗತ್ಯವಿದೆ. ಈ ಹಂತದಲ್ಲಿ ಭಾರತ ಅಮೆರಿಕಾದ ಬಳಿ ಪ್ರಿಡೇಟರ್ ಡ್ರೋನ್ ಖರೀದಿ ಒಪ್ಪಂದವನ್ನು ಸುಲಭವಾಗಿ ಯಶಸ್ವಿಗೊಳಿಸುವುದು ಸವಾಲಿನ ಸಂಗತಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಈ ಬಾರಿಯ ಅಮೆರಿಕಾ ಪ್ರವಾಸದಲ್ಲಿ ಮಹತ್ವದ ಹೆಜ್ಜೆ ಇಡಲಿದ್ದಾರೆ ಎಂಬ ನಿರೀಕ್ಷೆ ಇದೆ.
ಒಪ್ಪಂದವನ್ನು ಯಶಸ್ವಿಗೊಳಿಸಲು ಯತ್ನಿಸುತ್ತಿದ್ದೇವೆ, ಉಳಿದೆಲ್ಲಕ್ಕಿಂತ ಈ ವಿಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ಪ್ರೆಡೇಟರ್ ಡ್ರೋನ್ ಒಪ್ಪಂದದ ಬಗ್ಗೆ ಗಮನ ಹರಿಸುತ್ತಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.