ನವದೆಹಲಿ: ಭಾರತದ ಗಡಿ ಪ್ರದೇಶದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದ್ದು ಸಿಕ್ಕಿಂನಲ್ಲಿ ಚೀನಾ ಸೈನಿಕರು ಅತಿಕ್ರಮ ಪ್ರವೇಶ ಮಾಡಿದ್ದು ಭಾರತೀಯ ಪಡೆಗಳೊಂದಿಗೆ ತಳ್ಳಾಟ ನೂಕಾಟ ನಡೆಸಿದ್ದಾರೆ.
ಸಿಕ್ಕಿಂನ ದೋಕಾ ಲಾ ಜನರಲ್ ವಲಯದ ಬಳಿ ಕಳೆದ ಹತ್ತು ದಿನಗಳಿಂದ ಚೀನಾ ಸೈನಿಕರು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳನ್ನು ತಡೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾರತದ ಗಡಿಯಿಂದ ಚೀನಾ ಸೈನಿಕರು ಹಿಮ್ಮೆಟ್ಟಿಸಲು ಭಾರತೀಯ ಯೋದರು ಕಠಿಣ ಹೋರಾಟ ನಡೆಸುತ್ತಿದ್ದಾರೆ. ಜತೆಗೆ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಮಾನವ ಸರಪಳಿಯನ್ನು ಮಾಡಿ ಚೀನಾ ಸೈನಿಕರನ್ನು ತಡೆದು ನಿಲ್ಲಿಸಲು ಯತ್ನಿಸುತ್ತಿದ್ದಾರೆ. ಈ ವೇಳೆ ಚೀನಾ ಸೈನಿಕರು ಮತ್ತು ಭಾರತೀಯ ಯೋಧರ ನಡುವೆ ತಳ್ಳಾಟ ನೂಕಾಟ ನಡೆದಿದ್ದು ಇದನ್ನು ಕೆಲವರು ವಿಡಿಯೋ ಮತ್ತು ಚಿತ್ರಗಳನ್ನು ತೆಗೆದಿದ್ದಾರೆ.
ಚೀನಾ ಸೈನಿಕರು ದೋಖಾ ಲಾ ಪ್ರದೇಶದಲ್ಲಿ ಭಾರತದ ಎರಡು ಬಂಕರ್ ಗಳನ್ನು ಧ್ವಂಸ ಮಾಡಿ ತಮ್ಮ ಪುಂಡಾಟ ನಡೆಸಿದ್ದಾರೆ. ಇನ್ನು ಉಭಯ ದೇಶದ ಸೇನಾಧಿಕಾರಿಗಳು ಜೂನ್ 20ರಂದು ಧ್ವಜ ಸಭೆಯನ್ನು ಕರೆದಿದ್ದರು ಗಡಿಯಲ್ಲಿ ಮಾತ್ರ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ.
ದೋಖಾ ಲಾ ಬಳಿ ಚೀನಾ ಯೋಧರು ಅತಿಕ್ರಮ ಪ್ರವೇಶ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ 2008ರ ನವೆಂಬರ್ ತಿಂಗಳಲ್ಲಿ ಚೀನಾ ಯೋಧರು ಭಾರತೀಯ ಯೋಧರ ಬಂಕರ್ ಗಳನ್ನು ಧ್ವಂಸ ಮಾಡಿದ್ದರು.