ದೇಶ

ಪಾಕ್'ಗೆ ಪಾಠ ಕಲಿಸಲು ಸೀಮಿತ ದಾಳಿಗಿಂತಲೂ ಉತ್ತಮವಾದ ಆಯ್ಕೆಗಳು ಭಾರತದ ಬಳಿ ಇವೆ: ಬಿಪಿನ್ ರಾವತ್

Manjula VN

ನವದೆಹಲಿ: ಪಾಕಿಸ್ತಾನಕ್ಕೆ ಪಾಠ ಕಲಿಸಲು ಸೀಮಿತ ದಾಳಿಗಿಂತಲೂ ಉತ್ತಮವಾದ ಆಯ್ಕೆಗಳು ಭಾರತದ ಮುಂದಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ. 


ಮೇ.1 ರಂದು ಭಾರತೀಯ ಯೋಧರಿಬ್ಬರ ಶಿರಚ್ಛೇದ ಮಾಡಿದ್ದ ಪಾಕಿಸ್ತಾನದ ಪೈಶಾಚಿಕ ಕೃತ್ಯ ಕುರಿತಂತೆ ಖಾಸಗಿ ಸುದ್ದಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಅವರು, ಆರಾಮವಾಗಿ ಯುದ್ಧ ಮಾಡುತ್ತಿದ್ದೇನೆಂದು ಪಾಕಿಸ್ತಾನ ಭಾವಿಸುತ್ತಿದೆ. ಆದರೆ, ನಮ್ಮ ಬಳಿ ಸೀಮಿತ ದಾಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಆಯ್ಕೆಗಳಿವೆ. ನಮ್ಮ ಸೇನೆ ಅಸಂಸ್ಕೃತ ಹಾಗೂ ಅಮಾನವೀಯತೆಯಿಂದ ಕೂಡಿಲ್ಲ. ಪಾಕಿಸ್ತಾನ ಯೋಧರ ತಲೆಗಳನ್ನು ನಾವು ಕೇಳುವುದಿಲ್ಲ. ಏಕೆಂದರೆ, ನಮ್ಮದು ಶಿಸ್ತಿನ ಸೇನೆಯಾಗಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನನ್ನು ಜಾಗತಿಕ ಭಯೋತ್ಪಾದಕನೆಂದು ಅಮೆರಿದ ಘೋಷಿಸಿರುವುದರ ಕುರಿತಂತೆ ಮಾತನಾಡಿರುವ ಅವರು, ಪಾಕಿಸ್ತಾನ ನಿಜವಾಗಿಯೂ ಸಯ್ಯದ್ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡುತ್ತೇನೆ. ಏಕೆಂದರೆ, ಪ್ರತೀ ಬಾರಿ ಯಾವುದಾದರೂ ಪಟ್ಟ ಕಟ್ಟಿದಾಗಲೂ ಆತ ಪ್ರತಿಭಟನೆಗಳಿಗೆ ದಿನ ನಿಗದಿಪಡಿಸುತ್ತಿರುತ್ತಾನೆಂದು ತಿಳಿಸಿದ್ದಾರೆ. 

ಕಾಶ್ಮೀರ ನಾಯಕರೊಂದಿಗೆ ಶಾಂತಿಯುತ ಮಾತುಕತೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಶಾಂತಿಯಿದ್ದಾಗ ಮಾತ್ರ ಮಾತುಕತೆ ನಡೆಸಲು ಸಾಧ್ಯ. ಸೇನೆಗೆ ಮಾಡಲು ಬಹಳಷ್ಟು ಕೆಲವಿದೆ. ಕಾಶ್ಮೀರದಲ್ಲಿ ಶಾಂತಿಯನ್ನು ಮರುಸ್ಥಾಪನೆ ಮಾಡಬೇಕಿದೆ. ನಮ್ಮ ಯೋಧರ ಮೇಲೆ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಬೇಕು. ಅಂತಹ ದಿನ ಬಂದಾಗ ನಾನೇ ಖುದ್ದಾಗಿ ಮಾತುಕತೆ ಆಯೋಜಿಸುತ್ತೇನೆಂದು ಹೇಳಿದ್ದಾರೆ. 

ಕಾಶ್ಮೀರ ಯುವಕರೊಂದಿಗೆ ನೇರವಾಗಿ ಸಂಪರ್ಕ ಬೆಳೆಸಲು ಸೇನೆ ಪ್ರಯತ್ನ ಪಡುತ್ತಿದೆ. ಕಾಶ್ಮೀರದಲ್ಲಿರುವ ಯುವಕರಿಗೆ ತಪ್ಪು ಮಾಹಿತಿಗಳನ್ನು ರವಾನಿಸಲಾಗುತ್ತಿದೆ. 12 ಮತ್ತು 13 ವರ್ಷದ ಬಾಲಕರು ಬಾಂಬರ್ ಗಳಾಗಬೇಕೆಂದು ಬಯಸುತ್ತಿದ್ದಾರೆ. ಅಂತಹವನ್ನು ಗುರ್ತಿಸಿ ಮಾತುಕತೆ ನಡೆಸುವ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಜನರು ಹಿಂಸಾಚಾರವನ್ನು ಬಿಡಬೇಕು. ಮುಗ್ಧರು ಗಡಿ ದಾಟುವುದು ನಮಗಿಷ್ಟವಿಲ್ಲ ಎಂದಿದ್ದಾರೆ. 
SCROLL FOR NEXT