ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಲಖನೌ: ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಮಾನವಹತ್ಯೆಗೆ ಖಂಡನೆ ವ್ಯಕ್ತಪಡಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕಾನೂನನ್ನು ಕೈಗೆತ್ತಿಕೊಳ್ಳದಂತೆ ಗೋರಕ್ಷಕರಿಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಅಕ್ರಮವಾಗಿ ಗೋ ಸಾಗಾಣೆ ಕಂಡುಬಂದಿದ್ದೇ ಆದರೆ, ಜನರು ಅಧಿಕಾರಿಗಳಿಗೆ, ಆಡಳಿತ ಮಂಡಳಿಗೆ ಮಾಹಿತಿ ನೀಡಬೇಕೇ ಹೊರತು ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ನಿರ್ದೇಶನವನ್ನು ನಾವು ಅನುಸರಿಸುತ್ತಿದ್ದೇವೆ. ಕಸಾಯಿಖಾನೆಗಳನ್ನು ನಾವು ಬಂದ್ ಮಾಡುತ್ತಿಲ್ಲ. ಆದರೆ, ಸರ್ಕಾರದ ಸೂಚನೆಗಳನ್ನು, ನಿಯಮಗಳನ್ನು ಪಾಲಿಸದವರ ವಿರುದ್ಧ ನಾವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಜನರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಅಕ್ರಮ ಗೋಸಾಗಣೆ ಕಂಡುಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.
ಇದೇ ವೇಳೆ ಆಯೋಧ್ಯೆ ರಾಮ ಮಂದಿ ವಿವಾದ ಸಂಬಂಧ ಮಾತನಾಡಿರುವ ಅವರು, ರಾಮ ಮಂದಿರ ವಿವಾದ ಪರಸ್ಪರ ಸಮ್ಮತಿಯ ಮೂಲಕ ಬಗೆಹರಿಯಬೇಕಿದೆ. ಪ್ರಸ್ತುತ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ವಿವಾದ ಸಂಬಂಧ ಈ ಹಿಂದೆಯೇ ಪರಸ್ಪರ ಸಮ್ಮತಿಗಳ ಮೂಲಕ ಎರಡೂ ಧರ್ಮಗಳೂ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದ್ದೆ. ಅಯೋಧ್ಯೆ ವಿಚಾರದಲ್ಲೇ ನಾವು ಸೋದರತ್ವ ಭಾವವನ್ನು ಹಂಚಲು ಯತ್ನಿಸುತ್ತಿದ್ದೇವೆ. ಈ ಹಿಂದಿದ್ದ ಸರ್ಕಾರದಂತೆ ನಾವು ಜನರೊಂದಿಗೆ ಯಾವುದೇ ರೀತಿ ಪಕ್ಷಪಾತಗಳನ್ನು ಮಾಡುತ್ತಿಲ್ಲ ಎಂದಿದ್ದಾರೆ.
ನಂತರ ರೈತರ ಸಾಲ ಮನ್ನಾ ಕುರಿತಂತೆ ಮಾತನಾಡಿರುವ ಅವರು, ಸಾಲಮನ್ನಾವನ್ನು ರೈತರಿಗೆ ನೀಡಿರುವ ಉಡುಗೊರೆಯೆಂಬಂತೆ ನೋಡಬಾರದು. ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ರೈತರ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವುದು ಮುಖ್ಯವಾಗಿರುತ್ತದೆ.ರೂ.36 ಸಾವಿರ ಕೋಟಿ ರೈತರ ಸಾಲವನ್ನು ನಾವು ಮನ್ನಾ ಮಾಡಿದ್ದೇವೆ. ಆದರೆ, ಇದರ ಭಾರವನ್ನು ರಾಜ್ಯದ ಜನತೆ ಮೇಲೆ ನಾವು ಹಾಕುವುದಿಲ್ಲ. ಸರ್ಕಾರವೇ ಇದರ ಹೊಣೆಯನ್ನು ಹೊರಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos