ದೇಶ

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ; ಕ್ಷಮೆಯಾಚಿಸಿದ ಬಿಹಾರ ಸಚಿವ

Manjula VN
ಪಾಟ್ನ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಶೂನಿಂದ ಹೊಡೆಯಿರಿ ಎಂದು ಕರೆ ನೀಡಿ ಸಾಕಷ್ಟು ವಿರೋಧಗಳು ಹಾಗೂ ಟೀಕೆಗಳಿಗೆ ಗುರಿಯಾಗಿದ್ದ ಬಿಹಾರ ಸಚಿವ ಅಬ್ದುಲ್ ಜಲಿಲ್ ಮಸ್ತಾನ್ ಅವರು ಹೇಳಿಕೆ ಸಂಬಂಧ ಗುರುವಾರ ಕ್ಷಮೆಯಾಚಿಸಿದ್ದಾರೆ. 
ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಈ ಮೂಲಕ ನಾನು ಕ್ಷಮೆಯಾಚಿಸುತ್ತಿದ್ದೇನೆ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ, ಕ್ಷಮಿಸಿ. ದೇಶದ ಪ್ರಧಾನಮಂತ್ರಿಗಳಿಗೆ ಅವಮಾನ ಮಾಡಿದರೆ, ದೇಶಕ್ಕೆ ಅವಮಾನ ಮಾಡಿದಂತೆ ಎಂದು ಹೇಳಿದ್ದಾರೆ. 
ಪೂರ್ನಿಯಾ ಜಿಲ್ಲೆಯ ಅಮೌರ್ ಎಂಬದಲ್ಲಿ ಫೆ.22 ರಂದು ಸಾರ್ವಜನಿಕ ಸಭೆ ನಡೆಸಿದ್ದ ಜಲಿಲ್ ಅವರು ಕೇಂದ್ರ ಸರ್ಕಾರ ನೋಟು ನಿಷೇಧದ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಎಂದು ಜನರಿಗೆ ಕರೆ ನೀಡಿದ್ದರು. 50 ದಿನಗಳಲ್ಲಿ ನೋಟು ನಿಷೇಧದಿಂದಾಗುತ್ತಿರುವ ಬಿಕ್ಕಟ್ಟು ಶಮನವಾಗದಿದ್ದರೆ ನೀವು ಕೊಡುವ ಶಿಕ್ಷೆಯನ್ನು ಎದುರಿಸಲು ನಾನು ಸಿದ್ಧ ಎಂದು ಮೋದಿ ವಾಗ್ಧಾನ ಮಾಡಿದ್ದರು. ಆದರೆ, ಸಮಸ್ಯೆಗಳು ಈಗಲೂ ಮುಗಿದಿಲ್ಲ. ಮತ್ತೀಗ ಪ್ರಧಾನಿಗೆ ನೀವೇ ಶಿಕ್ಷೆ ನೀಡಿ, ಪ್ರಧಾನಮಂತ್ರಿಗಳ ಭಾವಚಿತ್ರಕ್ಕೆ ಶೂನಿಂದ ಹೊಡೆಯಿರಿ ಎಂದು ಹೇಳಿದ್ದರು. 
ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ಹಾಗೂ ಟೀಕೆಗಳು ವ್ಯಕ್ತವಾಗತೊಡಗಿದ್ದವು. ಅಲ್ಲದೆ ಜಲಿಲ್ ಅವರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಜಲಿಲ್ ಅವರು ಇಂದು ಕ್ಷಮೆಯಾಚಿಸಿದ್ದಾರೆ. 
SCROLL FOR NEXT