ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ವಾರಣಾಸಿ: 2014ರ ಲೋಕಸಭೆ ಚುನಾವಣೆಯ ಯಶಸ್ಸಿನಂತೆಯೇ ಉತ್ತರಪ್ರದೇಶದಲ್ಲಿ ಬಿಜೆಪಿ ಬಹುಮತದ ಮೂಲಕ ಗೆಲವು ಸಾಧಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಗುರುವಾರ ಹೇಳಿದ್ದಾರೆ.
ವಾರಣಾಸಿ ವ್ಯಾಪಾರಿ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರ ಜನರ ವಿಶ್ವಾಸ ಪಡೆಯುವಲ್ಲಿ ಯಶಸ್ವಿಯಾಗಿದೆ. ದೇಶದ ಜನತೆ ಹಿಸಾಸಕ್ತಿಗಾಗಿ ನೋಟು ನಿಷೇಧ ನಿರ್ಧಾರ ಯೋಜನೆ ಉತ್ತಮವಾದ ನಿರ್ಧಾರವಾಗಿದೆ. ಗ್ರಾಮೀಣ ಭಾಗದ ಜನತೆ ಒಂದು ಸಮಯದಲ್ಲಿ ನಮಗೆ ಮತವನ್ನು ಹಾಕದ ಜನತೆಯಾಗಿ ಉಳಿದಿದ್ದರು. ನೋಟು ನಿಷೇಧ ಉತ್ತಮ ನಿರ್ಧಾರದಿಂದ ಅವರು ಇದೀಗ ನಮಗೆ ಮತಹಾಕುತ್ತಿದ್ದಾರೆಂದು ಹೇಳಿದ್ದಾರೆ.
ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರುವ ನೋಟು ನಿಷೇಧದಂತಹ ದೊಡ್ಡ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿತ್ತು. ಆರ್ಥಿಕತೆಯಲ್ಲಿ ಭಾರತ ಅತೀ ವೇಗವಾಗಿ ಬೆಳೆಯುತ್ತಿರುವ ದೇಶವೆಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಹು ನಿರೀಕ್ಷಿತ ಉತ್ತರಪ್ರದೇಶ ಚುನಾವಣೆ ಕುರಿತಂತೆ ಮಾತನಾಡಿರುವ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಬಿ ಬಹುಮತದಿಂದ ಗೆಲವು ಸಾಧಿಸಿತ್ತು. ಇದೇ ರೀತಿಯಲ್ಲಿಯೇ ಉತ್ತರಪ್ರದೇಶದಲ್ಲಿ ಬಿಜೆಪಿ ಬಹುಮತದ ಮೂಲಕ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿರುವ ಅವರು, ಲೋಕಸಭೆ 2014ರ ಚುನಾವಣೆ ವೇಳೆ ಮತದಾರರು ಮೋದಿಯವರನ್ನು ಮೊದಲೇ ಒಪ್ಪಿಕೊಂಡಿದ್ದರು. ನಂತರ ಬಿಜೆಪಿ ಅವರನ್ನು ಒಪ್ಪಿಕೊಂಡಿತ್ತು. ಕೊನೆಗೆ ನಮ್ಮ ಸಂಸದೀಯ ಮಂಡಳಿ ಮೋದಿಯವರನ್ನು ನಾಮನಿರ್ದೇಶನ ಮಾಡಿತ್ತು. ನಂತರ ನಾವು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದೆವು.
1984ರ ಬಳಿಕ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದು ಸ್ಪಷ್ಟ ಬಹುಮತದ ಮೂಲಕ ಗೆಲವು ಸಾಧಿಸಿತ್ತು. ಇದೇ ಇತಿಹಾಸ ಉತ್ತರಪ್ರದೇಶದಲ್ಲಿ ಮರುಕಳಿಸಲಿದೆ.
ಲೋಕಸಭೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಎದುರಿಸಿದ ಕಾಂಗ್ರೆಸ್ ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಷ್ಟೇ ಕೆಲಸ ಮಾಡುತ್ತಿದೆ. ದೇಶಕ್ಕಾಗಿ ಅಲ್ಲ. ಇದೀಗ ಬಿಜೆಪಿ ಪಕ್ಷ ಭಾರತದ ಪಕ್ಷವಾಗಿ ಬೆಳೆಯುತ್ತಿದೆ ಎಂದಿದ್ದಾರೆ.
ನಂತರ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ಧ ಕಿಡಿಕಾರಿದ ಅವರು, ಕ್ರಿಮಿನಲ್ ಅಭ್ಯರ್ಥಿಗಳಿಗೆ ಪಕ್ಷದಲ್ಲಿ ಟಿಕೆಟ್ ಗಳನ್ನು ನೀಡಿದರೆ, ಗುಂಡಾರಾಜ್ಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಹಾಗೂ ಜಾತಿ ಆಧಾರಿತ ರಾಜಕೀಯ ಮಾಡಲು ದಾರಿ ಮಾಡಿದಂತಾಗುತ್ತದೆ. ಅಖಿಲೇಶ್ ಅವರು ಒಂದು ಎಕ್ಸ್ ಪ್ರೆಸ್ ವೇಯನ್ನು ನಿರ್ಮಾಣ ಮಾಡಿದ್ದರೆ, ನಮ್ಮ ಕೇಂದ್ರ ಸಚಿವ ನಿತೀಶ್ ಗಡ್ಕರಿ ಯವರು ಕೇಂದ್ರ ಸರ್ಕಾರ ನೀಡಿದ್ದ ಟೆಂಡರ್ ಗಳ ಪೈಕಿ ಈಗಾಗಲೇ ಅರ್ಧದಷ್ಟು ಪೂರ್ಣಗೊಳಿಸಿ 255 ಹೆದ್ದಾರಿಗಳನ್ನು ನಿರ್ಮಾಣ ಮಾಡಿದ್ದಾರೆಂದು ವ್ಯಂಗ್ಯವಾಡಿದ್ದಾರೆ.