ದೇಶ

ರಾಜಸ್ತಾನದಲ್ಲಿ 3 ಪಾಕ್ ಬೇಹುಗಾರರ ಬಂಧನ

Manjula VN
ಜೋಧ್ಪುರ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮೂವರು ಬೇಹುಗಾರರನ್ನು ಶನಿವಾರ ರಾಜಸ್ತಾನದಲ್ಲಿ ಬಂಧನಕ್ಕೊಳಪಡಿಸಲಾಗಿದೆ. 
ಬಂಧಿತರನ್ನು ಸಂತೋಷ್ ಅಲಿಯಾಸ್ ಸತ್ರಮ್ ಮಹೇಶ್ವರಿ, ವಿನೋದ್ ಮಹೇಶ್ವರಿ ಮತ್ತು ಸುನಿಲ್ ಮಹೇಶ್ವರಿ ಎಂದು ಗುರ್ತಿಸಲಾಗಿದೆ. ಬಂಧಿತ ಮೂವರು ಸಂಬಂಧಿಕರೇ ಆಗಿದ್ದು, ಖಚಿತ ಮಾಹಿತಿ ಆಧಾರದ ಮೇಲೆ ನಿನ್ನೆ ರಾಜಸ್ತಾನದ ಜೋಧ್ಪುರದಲ್ಲಿ ಬಂಧನಕ್ಕೊಳಪಡಿಸಲಾಗಿದೆ. 
ಕಳೆದ ಫೆಬ್ರವರಿ ತಿಂಗಳಿನಲ್ಲಿ ಜೈಸಲ್ಮೇರ್ ಜಿಲ್ಲೆಯಲ್ಲಿ ಹಜಿ ಖಾನ್ ಎಂಬ ಶಂಕಿತ ಉಗ್ರನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಈತನನ್ನು ವಿಚಾರಣೆಗೊಳಪಡಿಸಿದ ಬಳಿಕ ಹಲವಾರು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದ. ಈತ ನೀಡಿದ ಮಾಹಿತಿ ಮೇರೆಗೆ ಇದೀಗ ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಲಾಗಿದೆ. 
ಪ್ರಸ್ತುತ ಬಂಧನಕ್ಕೊಳಗಾಗಿರುವ ಮಹೇಶ್ವರಿ ಹಲವು ವರ್ಷಗಳಿಂದಲೂ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿಕೊಕಂಡಿದ್ದ. ಅಲ್ಲದೆ. ಹಜಿ ಖಾನ್ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದ. ಮತ್ತಿಬ್ಬರು ಆರೋಪಿಗಳು ಜೋದ್ಪುರದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದು, ಮಹೇಶ್ವರಿ ಜೊತೆಗೆ ಕೈಜೋಡಿಸಿ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದರು. 
ಮೂಲಗಳು ತಿಳಿಸಿರುವ ಪ್ರಕಾರ, ಮಹೇಶ್ವರಿ ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ. ಈ ವೇಳೆ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನ ಅಧಿಕಾರಿಗಳಿಗೆ ನೀಡುತ್ತಿದ್ದ. ವಾಯು ಪಡೆ ಹಾಗೂ ಗಡಿ ಭದ್ರತಾ ಪಡೆದ ಕಾರ್ಯಾಚರಣೆಗಳ ಕುರಿತ ಮಾಹಿತಿ, ನಕ್ಷೆಗಳನ್ನು ಅಲ್ಲಿನ ಅಧಿಕಾರಿಗಳಿಗೆ ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ. ಪ್ರಸ್ತುತ ಮೂವರನ್ನು ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ಆರೋಪಿಗಳಿಂದ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. 
SCROLL FOR NEXT