ರಾಮ್ ಜಸ್ ಕಾಲೇಜು ಹಿಂಸಾಚಾರ ಪ್ರಕರಣದ ವರದಿ ಕೇಳಿದ ದೆಹಲಿ ಹೈಕೋರ್ಟ್!
ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ದೆಹಲಿ ವಿಶ್ವವಿದ್ಯಾಲಯದ ರಾಮ್ ಜಸ್ ಕಾಲೇಜು ಹಿಂಸಾಚಾರ ಪ್ರಕರಣ ಸಂಬಂಧ ಪೊಲೀಸರು ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ದೆಹಲಿ ನ್ಯಾಯಾಲಯ ಪೊಲೀಸ್ ಇಲಾಖೆಯಿಂದ ವರದಿ ಕೇಳಿದೆ.
ನವದೆಹಲಿ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ದೆಹಲಿ ವಿಶ್ವವಿದ್ಯಾಲಯದ ರಾಮ್ ಜಸ್ ಕಾಲೇಜು ಹಿಂಸಾಚಾರ ಪ್ರಕರಣ ಸಂಬಂಧ ಪೊಲೀಸರು ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ದೆಹಲಿ ನ್ಯಾಯಾಲಯ ಪೊಲೀಸ್ ಇಲಾಖೆಯಿಂದ ವರದಿ ಕೇಳಿದೆ.
ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ನ ನಲ್ಲಿ ಫೆಬ್ರವರಿಯಲ್ಲಿ ನಡೆದ ದೇಶ ವಿರೋಧ ಕೂಗು, ಪ್ರತಿಭಟನೆ ಹಾಗೂ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 30ರೊಳಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ನ್ಯಾಯಾಧೀಶರು ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಫೆಬ್ರವರಿ 22ರಂದು ಅಕ್ರಮವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಿ ಕಳೆದ ಬುಧವಾರ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ತರುಣ್ ನಾರಂಗ್ ಮತ್ತು ದೀಪಕ್ ಜೋಷಿ ಎಂಬ ವಿದ್ಯಾರ್ಥಿಗಳು ದೆಹಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅಂತೆಯೇ ಪ್ರಕರಣ ಸಂಬಂಧ ತನಿಖೆ ಮಾಡಲು ದೆಹಲಿಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಮಿತಿ ರಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರಿಗೆ ವರದಿ ನೀಡುವಂತೆ ಸೂಚನೆ ನೀಡಿದೆ.
ಕಳೆದ ಫೆಬ್ರವರಿ 22ರಂದು ದೆಹಲಿ ವಿವಿ ಆವರಣದಲ್ಲಿರುವ ರಾಮ್ ಜಸ್ ಕಾಲೇಜಿನಲ್ಲಿ ಸಾಹಿತ್ಯ ಉತ್ಸವ ನಿಮಿತ್ತ ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ ಸಂಘಟನೆ ಜೆಎನ್ ಯು ವಿದ್ಯಾರ್ಥಿ ಮುಖಂಡ ಉಮರ್ ಖಲೀದ್ ಭಾಷಣ ಏರ್ಪಡಿಸಲಾಗಿತ್ತು. ಈ ಭಾಷಣಕ್ಕೆ ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ತೀವ್ರ ವಿರೋಧವಿತ್ತು. ಹೀಗಾಗಿ ಎಬಿವಿಪಿ ಭಾಷಣ ಕಾರ್ಯಕ್ರಮವಿದ್ದ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಈ ವೇಳೆ ಉಭಯ ಸಂಘಟನೆಗಳ ಕಾರ್ಯಕರ್ತರ ನಡುವೆ ವಾಕ್ಸಮರ ಏರ್ಪಟ್ಟು, ಬಳಿಕ ಅದು ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಪ್ರಹಾರ ನಡೆಸಿದ್ದರು.