ದೇಶ

ಲೈಂಗಿಕ ಕಿರುಕುಳ ನೀಡಿದ್ದ ಯುವಕರಿಗೆ ಥಳಿಸಿ "ಹೀರೋ" ಆಗಿದ್ದ ಯುವತಿಯರು ಈಗ "ವಿಲನ್ "ಆದರು!

Srinivasamurthy VN

ಹರ್ಯಾಣ: ವರ್ಷಗಳ ಹಿಂದೆ ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ಯುವಕರನ್ನು ಥಳಿಸಿ ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ "ಹಿರೋ" ಆಗಿದ್ದ ಸೋನೆಪತ್ ನ ಸಹೋದರಿಯರು ಇದೀಗ ಅಕ್ಷರಶಃ ವಿಲನ್ ಗಳಾಗಿ  ಮಾರ್ಪಟ್ಟಿದ್ದಾರೆ.

ಹೌದು...2014ರ ನವೆಂಬರ್ 28ರಂದು ಬಸ್ ನಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿದರು ಎಂದು ಆರೋಪಿಸಿ ಮೂವರು ಯುವಕರನ್ನು ಸಾರ್ವಜನಿಕವಾಗಿ ಬಸ್ ನಲ್ಲೇ ಥಳಿಸಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಪೂಜಾ ಮತ್ತು  ಆರತಿ ಎಂಬ ಸಹೋದರಿಯರು  ಇದೀಗ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ವಿಲನ್ ಗಳಾಗಿ ನಿಂತಿದ್ದಾರೆ. ಅಂದು ಬಸ್ ನಲ್ಲಿ ಸೀಟಿಗಾಗಿ ನಡೆದ ಜಗಳವನ್ನು ಲೈಂಗಿಕ ಕಿರುಕುಳವಾಗಿ ಬಿಂಬಿಸಿ ದೂರು ನೀಡಿದ್ದ ಯುವತಿಯರ ಅಸಲಿ  ಮುಖವಾಡವನ್ನು ಕೋರ್ಟ್ ಬಯಲಿಗೆಳೆದಿದ್ದು, ಆರೋಪಿತ ಯುವಕರಾದ ಮೋಹಿತ್, ಕುಲದೀಪ್, ದೀಪಕ್ ಎಂಬುವವರನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ.

ಪ್ರಕರಣ ಸಂಬಂಧ ಯುವಕರು ಬಂಧಿತರಾಗಿದ್ದರೂ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ನ್ಯಾಯಾಯಲಯದಲ್ಲಿ ಮಾತ್ರ ವಿಚಾರಣೆ ನಡೆದಿತ್ತು. ಇದೀಗ ತೀರ್ಪು ಪ್ರಕಟವಾಗಿದ್ದು, ಯುವಕರು ನಿರ್ದೋಷಿಗಳೆಂದು  ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ಯುವತಿಯರು ದಾಖಲಿಸಿದ್ದ ಲೈಂಗಿಕ ದೌರ್ಜನ್ಯದ ದೂರನ್ನು ವಿಚಾರಣೆ ನಡೆಸಿದ ಹರ್ಯಾಣ ಕೋರ್ಟ್ ಸುಧೀರ್ಘ ವಿಚಾರಣೆ ಬಳಿಕ ಯುವಕರು ನಿರ್ದೋಷಿಗಳೆಂದು ತೀರ್ಪು ನೀಡಿದೆ. ವಿಚಾರಣೆ ವೇಳೆ ಅಂದು ಯುವತಿಯರೊಂದಿಗೆ ಇದ್ದ ಸಹ ಪ್ರಯಾಣಿಕರ ವಿಚಾರಣೆ ನಡೆಸಿದ್ದ ಕೋರ್ಟ್ ಹೇಳಿಕೆ ದಾಖಲಿಸಿಕೊಂಡಿತ್ತು. ಈ ವೇಳೆ ಸಹ ಪ್ರಯಾಣಿಕರು ಬಸ್ ನಲ್ಲಿ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಬದಲಿಗೆ  ಸೀಟಿಗಾಗಿ ನಡೆದ ಗಲಾಟೆಯನ್ನು ಅವರು ಲೈಂಗಿಕ ಕಿರುಕುಳವಾಗಿ ಬಿಂಬಿಸಿದರು ಎಂದು ಸಾಕ್ಷ್ಯ ಹೇಳಿದ್ದಾರೆ. ಇದಲ್ಲದೆ ಪ್ರಕರಣದ ಆರೋಪಿ ಯುವಕರು ಮತ್ತು ಯುವತಿಯರನ್ನು ಸುಳ್ಳು ಪತ್ತೆ ಪರೀಕ್ಷೆಗೂ ಒಳಪಡಿಸಲಾಗಿತ್ತು. ಈ  ವೇಳೆ ಯುವಕರು ಪಾಸಾಗಿದ್ದು, ಆರೋಪ ಮಾಡಿದ್ದ ಯುವತಿಯರ ಹೇಳಿಕೆಗಳಲ್ಲಿ ಬದಲಾವಣೆ ಕಂಡುಬಂದಿತ್ತು. ಅಲ್ಲದೆ ಪ್ರತ್ಯಕ್ಷ ಸಾಕ್ಷ್ಯಗಳ ಹೇಳಿಕೆಗಳ ಅನ್ವಯ ಇದೀಗ ತೀರ್ಪು ನೀಡಿರುವ ಕೋರ್ಟ್ ಯುವಕರನ್ನು  ನಿರ್ದೋಷಿಗಳೆಂದು ತೀರ್ಪು ನೀಡಿ ಪ್ರಕರಣವನ್ನು ವಜಾ ಮಾಡಿದೆ.

ಸಹೋದರಿಯರ ಹೈಡ್ರಾಮಾಕ್ಕೆ ಯುವಕರ ಭವಿಷ್ಯ ಹಾಳು!
ಇನ್ನು ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಮೂವರು ಯುವಕ ಭವಿಷ್ಯ ಯುವತಿಯ ಹೈಡ್ರಾಮಾಕ್ಕೆ ಬಲಿಯಾಗಿದ್ದು, ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕಿದ್ದ ಯುವಕರು ಇದೀಗ ಸರ್ಕಾರಿ ಉದ್ಯೋಗದಿಂದ  ಅನರ್ಹಗೊಂಡಿದ್ದಾರೆ. ಯುವಕರ ಮೇಲೆ ಪೊಲೀಸ್ ದೂರು ದಾಖಲಾದ ಪರಿಣಾಮ ಯುವಕರು ಸರ್ಕಾರಿ ಉದ್ಯೋಗಕ್ಕೆ ಅನರ್ಹವಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಆರೋಪಿ ಯುವಕರ ಪೈಕಿ ಮೋಹಿತ್  ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆ ಹೊತ್ತಿದ್ದನಂತೆ. ಅಲ್ಲದೆ ಈ ಬಗ್ಗೆ ಲಿಖಿತ ಪರೀಕ್ಷೆ ಕೂಡ ಬರೆದಿದ್ದನಂತೆ. ದೀಪಕ್ ಮತ್ತು ಕುಲದೀಪ್ ಎಂಬುವವರು ಭಾರತೀಯ ಸೇನೆಗೆ ಸೇರಲು ಇಚ್ಛಿಸಿದ್ದರಂತೆ. ಇದೀಗ ಈ  ಪ್ರಕರಣದ ಕಪ್ಪು ಛಾಯೆಯಿಂದ ಯುವಕರ ಭವಿಷ್ಯವೇ ಅಂಧಕಾರದಲ್ಲಿರುವಂತಾಗಿದೆ.

ಯುವತಿಯರಿಗೆ ಘೋಷಣೆ ಮಾಡಿದ್ದ ಪ್ರಶಸ್ತಿ ವಾಪಸ್ ಪಡೆದ ಹರ್ಯಾಣ ಸರ್ಕಾರ

ಇನ್ನು ಅಂದು ಯುವತಿಯರು ಯುವಕರನ್ನು ಥಳಿಸಿದ ಪರಿ ನೋಡಿ ಯುವತಿಯರ ಧೈರ್ಯ ಸಾಹಸಕ್ಕೆ ಮೆಚ್ಚಿ ಹರ್ಯಾಣ ಸರ್ಕಾರ ಸಹೋದರ ಯುವತಿಯರಿಗೆ ಪ್ರಶಸ್ತಿ ಘೋಷಣೆ ಮಾಡಿತ್ತು. ಆದರೆ ಯಾವಾಗ ಸುಳ್ಳು ಪತ್ತೆ  ಪರೀಕ್ಷೆಯಲ್ಲಿ ಯುವತಿಯರ ಹೇಳಿಕೆ ಸುಳ್ಳು ಎಂದು ದಾಖಲಾಯಿತೋ ಆಗ ಸರ್ಕಾರ ಪ್ರಶಸ್ತಿ ನೀಡುವ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.

ಹೈಕೋರ್ಟ್ ಗೆ ಪ್ರಕರಣ?

ಇನ್ನು ಹರ್ಯಾಣ ಕೋರ್ಟ್ ನಲ್ಲಿ ತೀರ್ಪು ತಮಗೆ ವ್ಯತಿರಿಕ್ತವಾಗಿ ಬಂದ ಪರಿಣಾಮ ಯುವತಿಯರು ತೀರ್ಪು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಹೇಳಿಕೆ ನೀಡಿದ್ದಾರೆ.

SCROLL FOR NEXT