ಧಾರ್ಮಿಕ ನಾಯಕರು ಭ್ರಷ್ಟರು ಎಂಬುದು ಶೇ.71 ಭಾರತೀಯರ ನಂಬಿಕೆ: ಸಮೀಕ್ಷೆ
ಬರ್ಲಿನ್/ ನವದೆಹಲಿ: ಬರ್ಲಿನ್ ಮೂಲದ ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಷನಲ್ ಏಷ್ಯಾ ಪೆಸಿಫಿಕ್ ನಲ್ಲಿರುವ ಭ್ರಷ್ಟಾಚಾರದ ಬಗ್ಗೆ ಸಮೀಕ್ಷೆ ನಡೆಸಿದ್ದು, ಚೀನಾ, ವಿಯೆಟ್ನಾಂ, ಜಪಾನ್, ಪಾಕಿಸ್ತಾನಕ್ಕಿಂತ ಅತಿ ಹೆಚ್ಚು ಭ್ರಷ್ಟಾಚಾರ ಪ್ರಮಾಣ ಇರುವುದು ಭಾರತದಲ್ಲೇ ಎಂದು ಹೇಳಿದೆ.
ಸಮೀಕ್ಷೆಯ ವರದಿಯ ಪ್ರಕಾರ ಭಾರತದಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಲಂಚ ನೀಡಬೇಕಾಗುತ್ತದೆ ಶೇ.69 ರಷ್ಟು ಜನರು ಹೇಳಿದ್ದಾರೆ. ಈ ಭ್ರಷ್ಟಾಚಾರದ ಪ್ರಮಾಣ ಭಾರತದಲ್ಲಿ ಶೇ.69 ರಷ್ಟಿದ್ದರೆ ವಿಯೆಟ್ನಾಂ ನಲ್ಲಿ ಶೇ.65, ಪಾಕಿಸ್ತಾನದಲ್ಲಿ ಶೇ.40, ಚೀನಾದಲ್ಲಿ ಶೇ.26 ರಷ್ಟು, ದಕ್ಷಿಣ ಕೊರಿಯಾದಲ್ಲಿ ಶೇ.3 ರಷ್ಟು ಹಾಗೂ ಜಪಾನ್ ನಲ್ಲಿ ಅತ್ಯಂತ ಕಡಿಮೆ ಅಂದರೆ ಶೆ.0.2 ರಷ್ಟಿದೆ.
ಚೀನಾದಲ್ಲಿ ಕಳೆದ ವರ್ಷಕ್ಕಿಂತ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಶೇ.73 ರಷ್ಟು ಜನರು ಹೇಳಿದ್ದರೆ ಭಾರತದಲ್ಲಿ ಶೇ.41 ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಷ್ಯಾ-ಪೆಸಿಫಿಕ್ ವ್ಯಾಪ್ತಿಯಲ್ಲಿ ಬರುವ 16 ರಾಷ್ಟ್ರಗಳಲ್ಲಿ 20,000 ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗಾಗಿ ಸಂದರ್ಶಿಸಲಾಗಿದ್ದು, 900 ಮಿಲಿಯನ್ ಜನರು ಒಮ್ಮೆಯಾದರೂ ಲಂಚ ನೀಡಿರುವುದಾಗಿ ಹೇಳಿದ್ದಾರೆ. ಸಾರ್ವಜನಿಕ ಇಲಾಖೆಗಳಲ್ಲಿ ಲಂಚ ಪಡೆಯುವವರ ಪಟ್ಟಿಯಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದು, ಶೇ.38 ರಷ್ಟು ಅತಿ ಬಡತನದಲ್ಲಿರುವವರು ಲಂಚ ನೀಡಿರುವುದಾಗಿ ಹೇಳಿದ್ದಾರೆ. ದಾಖಲೆಗಳನ್ನು ಪಡೆಯುವುದಕ್ಕೆ, ಕೋರ್ಟ್ ಅಧಿಕಾರಿಗಳಿಗೆ, ಜಡ್ಜ್ ಗಳಿಗೆ, ಪೊಲೀಸರಿಗೆ, ಆಸ್ಪತ್ರೆಯಲ್ಲಿ ಶಿಕ್ಷಕರಿಗೆ ಹೀಗೆ ವಿವಿಧ ಹಂತಗಳಲ್ಲಿ ಸಾಮಾನ್ಯವಾಗಿ ಲಂಚ ನೀಡಲಾಗುತ್ತದೆ ಎಂದು ಸಮೀಕ್ಷೆಗೊಳಪಟ್ಟವರು ತಿಳಿಸಿದ್ದಾರೆ.
ಇದೇ ವೇಳೆ ಧಾರ್ಮಿಕ ನಾಯಕರ ಬಗ್ಗೆಯೂ ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಷನಲ್ ಸಮೀಕ್ಷೆ ನಡೆಸಿದ್ದು, ಸರ್ಕಾರಿ ಅಧಿಕಾರಿಗಳಂತೆ ಧಾರ್ಮಿಕ ನಾಯಕರೂ ಸಹ ಮಹಾ ಭ್ರಷ್ಟರಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಚ್ಚರಿಯೆಂದರೆ ಭಾರತದಲ್ಲಿ ಶೇ.71 ರಷ್ಟು ಜನರು ಧಾರ್ಮಿಕ ನಾಯಕರು ಭ್ರಷ್ಟರಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.