ಪಾಕಿಸ್ತಾನ: ಶೇ.84 ರಷ್ಟು ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರು!
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಶೇ.84 ರಷ್ಟು ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ ಎಂದು ಅಲ್ಲಿನ ಸಚಿವರೊಬ್ಬರು ಹೇಳಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ರಾಣಾ ತನ್ವೀರ್ ಹುಸೇನ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಜಲಸಂಪನ್ಮೂಲ ಸಂಶೋಧನಾ ಪರಿಷತ್ (ಪಿಸಿಆರ್ ಡಬ್ಲ್ಯೂಆರ್) ನ ಅಧ್ಯಯನದ ಪ್ರಕಾರ ದೇಶದಲ್ಲಿರುವ ನೀರು ಪೂರೈಕೆ ಯೋಜನೆಗಳ ಪೈಕಿ ಶೇ.72 ರಷ್ಟು ಮಾತ್ರ ಚಾಲ್ತಿಯಲ್ಲಿದೆ. ಈ ಪೈಕಿ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳುತ್ತಿರುವ ಶೇ.84 ರಷ್ಟು ಮಂದಿಗೆ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಇರುವ 195 ಮಿಲಿಯನ್ ಜನಸಂಖ್ಯೆಯ ಪೈಕಿ ಶೇ.84 ರಷ್ಟು ಜನರಿಗೆ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ. ಪಾಕಿಸ್ತಾನಕ್ಕೆ ಪೂರೈಕೆಯಾಗುವ ಶೇ.14 ರಷ್ಟು ಸಿಂಧ್ ಹಾಗೂ ಪಂಜಾಬ್ ಮೂಲದ್ದಾಗಿದ್ದು, ಬಹುತೇಕ ಭಾಗ ಕಲುಶಿತಗೊಂಡಿದೆ ಎಂದು ಪಿಸಿಆರ್ ಡಬ್ಲ್ಯೂ ವರದಿ ಮೂಲಕ ತಿಳಿದುಬಂದಿದೆ. ಶುದ್ಧ ಕುಡಿಯುವ ನೀರಿನ ಯೋಜನೆಗಾಗಿ ಕಳೆದ ನಾಲ್ಕು ವರ್ಷಗಳಿಂದ 279 ಮಿಲಿಯನ್ ರೂಪಾಯಿಯನ್ನು ವ್ಯಯಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.