ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರನ್ನು ದೆಹಲಿ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಮಾರ್ಚ್ 6 ರಂದು ಪಶ್ಚಿಮ ವಿಹಾರ ಪ್ರದೇಶದಲ್ಲಿ 17 ವರ್ಷದ ಅತುಲ್ ಅರೋರ ಎಂಬ ಯುವಕ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದಿದ್ದ ಮರ್ಸಿಡಿಸ್'ವೊಂದು ಯುವಕನ ಮೇಲೆ ಹರಿದು ಹೋಗಿತ್ತು. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಇದೀಗ ಪ್ರಕರಣ ಸಂಬಂಧ 27 ವರ್ಷದ ಉದ್ಯಮಿಯೊಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.
ಅಪಘಾತ ಮಾಡಿದ ಮರ್ಸಿಡಿಸ್ ನ್ನು ರಜೌರಿ ಗಾರ್ಡೆನ್ ಅಪರಾಧ ವಿಭಾಗದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಡಿದ ಮತ್ತಿನಲ್ಲಿ ಉದ್ಯಮಿ ಕಾರು ಚಾಲನೆ ಮಾಡಿದ್ದಾರೆ. ಈ ವೇಳೆ ಘಟನೆ ನಡೆದಿದೆ. ಘಟನೆ ವೇಳೆ ಆರೋಪಿಯೊಂದಿಗೆ ಆತನ ಗೆಳೆಯ ಕೂಡ ಕಾರಿನಲ್ಲಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.