ದುಬೈ: ರೈಲ್ವೆ ಆಧುನೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವ ಭಾರತ ಸರ್ಕಾರ ಅರಬ್ ನಿಂದ ಹೂಡಿಕೆ ನಿರೀಕ್ಷಿಸುತ್ತಿದೆ ಎಂದು ರೈಲ್ವೆ ಇಲಾಖೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಮುಂದಿನ 5 ವರ್ಷಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಭಾರತ ಸರ್ಕಾರ 140 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಈ ಪೈಕಿ ಹೆಚ್ಚಿನದ್ದನ್ನು ರೈಲುಗಳ ಆಧುನೀಕರಣ, ಹೊಸ ತಂತ್ರಜ್ಞಾನ ಅಳವಡಿಕೆಗೆ ವ್ಯಯಿಸಲಾಗುವುದು ಹಾಗೂ ಹೂಡಿಕೆಗಾಗಿ ಅರಬ್ ನ ಹೂಡಿಕೆ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸುರೇಶ್ ಪ್ರಭು ಮಾಹಿತಿ ನೀಡಿದ್ದಾರೆ.
ಭಾರತೀಯ ಮೂಲಸೌಕರ್ಯದಲ್ಲಿ ಪ್ರಮುಖವಾಗಿ ರೈಲ್ವೆ ಕ್ಷೇತ್ರದಲ್ಲಿ ಹೂಡಿಕೆಗೆ ಅವಕಾಶ ಇರುವುದರ ಬಗ್ಗೆ ಯುಎಇ ಸರ್ಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವರೂ ಉತ್ಸುಕರಾಗಿದ್ದಾರೆ ಎಂದು ಸುರೇಶ್ ಪ್ರಭು ತಿಳಿಸಿದ್ದಾರೆ.
ಅರಬ್ ಹೂಡಿಕೆ ಪ್ರಾಧಿಕಾರದೊಂದಿಗೆ ಸಕಾರಾತ್ಮಕ ಸಭೆ ನಡೆದಿದೆ. 2017 ರಲ್ಲೇ ರೈಲ್ವೆ ವಲಯದಲ್ಲಿ ಅರಬ್ ಹೂಡಿಕೆಗೆ ಸಂಬಂಧಿಸಿದಂತೆ ಪ್ರಗತಿಯಾಗಲಿದೆ ಎಂದು ಸುರೇಶ್ ಪ್ರಭು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅರಬ್ ಅತಿ ಹೆಚ್ಚು ಸಾರ್ವಭೌಮ ಸಂಪತ್ತು ನಿಧಿ ಇರುವ ವಿಶ್ವದ ಮೂರನೇ ರಾಷ್ಟ್ರವಾಗಿದ್ದು ಸುಮಾರು 92 ಬಿಲಿಯನ್ ಡಾಲರ್ ನಷ್ಟು ಸ್ವತ್ತುಗಳನ್ನು ಹೊಂದಿದೆ.