ನವದೆಹಲಿ: ಪುರುಷರಿಗೂ ಒಂದು ದಿನ ಮೀಸಲಿಡಬೇಕು ಎಂದಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಅವರು, ಪುರುಷರ ದಿನಾಚರಣೆ ಆರಂಭಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬುಧವಾರ ಸಲಹೆ ನೀಡಿದ್ದಾರೆ.
ಇಂದು ದೆಹಲಿ ಮಹಿಳಾ ಆಯೋಗ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮನೇಕಾ ಗಾಂಧಿ ಅವರು, ದೆಹಲಿ ಮುಖ್ಯಮಂತ್ರಿ ಹಲವು ಹೊಸತನಗಳನ್ನು ಜಾರಿಗೆ ತಂದಿದ್ದಾರೆ. ಈಗ ಪುರುಷರ ದಿನಾಚರಣೆ ಆರಂಭಿಸಲಿ ಎಂದಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ತುಂಬಾ ಮಹತ್ವದ ದಿನವಾಗಿದ್ದು, ಪುರುಷರಿಗೂ ಇಂತಹ ಒಂದು ದಿನ ಮೀಸಲಿಡುವ ಅಗತ್ಯವಿದೆ ಅನಿಸುತ್ತಿದೆ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ. ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಟ್ವೀಟರ್ ನಲ್ಲಿ ಆರಂಭಿಸಿರುವ 'ನಾನು ಸಮಾನ'(I am equal) ಅಭಿಯಾನಕ್ಕೆ ಕೈಜೋಡಿಸುವಂತೆ ದೇಶದ ಮಹಿಳೆಯರಿಗೆ ಕರೆ ನೀಡಿದ್ದಾರೆ.