ಶ್ರೀನಗರ: ಉತ್ತರ ಪ್ರದೇಶ, ಉತ್ತರಾಖಂಡ್ ರಾಜ್ಯಗಳಲ್ಲಿ ಚುನಾವಣೋತ್ತರ ಸಮೀಕ್ಷೆ, ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿನ ನಾಗಾಲೋಟದ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, 2019 ನ್ನೂ ಮರೆತು 2024 ಕ್ಕೆ ತಯಾರಿ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇವಲ ಟೀಕಿಸುವುದರಿಂದ ನಾವು ಎನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಸಕಾರಾತ್ಮಕ ದೂರದೃಷ್ಟಿ ಹೊಂದಿರುವ ನಾಯಕತ್ವದ ಬಗ್ಗೆ ಮತದಾರರಿಗೆ ಅರಿವು ಮೂಡಿಸಬೇಕಿದೆ ಎಂದು ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯನ್ನು ಎದುರಿಸಲು ಖಂಡಿತಾ ಸಾಧ್ಯವಿದೆ ಎಂಬುದನ್ನು ಪಂಜಾಬ್, ಗೋವಾ, ಮಣಿಪುರ ರಾಜ್ಯಗಳು ಸ್ಪಷ್ಟವಾಗಿ ಸೂಚಿಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಖಾಸುಮ್ಮನೆ ಟೀಕಿಸುವುದನ್ನು ಬಿಟ್ಟು ಸಕಾರಾತ್ಮಕವಾದ ಪರ್ಯಾಯವನ್ನು ನೀಡಬೇಕಷ್ಟೇ ಎಂದು ಅಬ್ದುಲ್ಲಾ ಹೇಳಿದ್ದಾರೆ.
ಈಗ ಸಮಸ್ತ ಭಾರತ ಒಪ್ಪುವ, 2019 ರಲ್ಲಿ ಬಿಜೆಪಿ, ನರೇಂದ್ರ ಮೋದಿ ಅವರನ್ನು ಎದುರಿಸುವ ಸಾಮರ್ಥ್ಯ ಇರುವ ನಾಯಕನೇ ಇಲ್ಲದಂತಾಗಿದೆ. ಆದ್ದರಿಂದ 2019 ನ್ನೂ ಮರೆತು 2024 ಕ್ಕೆ ತಯಾರಿ ನಡೆಸಬೇಕಿದೆ ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.