ದೇಶ

ಕಳ್ಳತನವಾಗಿದ್ದ ಕೈಲಾಶ್ ಸತ್ಯಾರ್ಥಿ ನೊಬೆಲ್ ಸಮ್ಮಾನ ಪತ್ರ ಅರಣ್ಯದಲ್ಲಿ ಪತ್ತೆ!

Srinivasamurthy VN

ನವದೆಹಲಿ: ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್‌ ಸತ್ಯಾರ್ಥಿಯವರ ಕಳವಾಗಿದ್ದ ನೊಬೆಲ್‌ ಸಮ್ಮಾನ ಪತ್ರ ದಕ್ಷಿಣ ದೆಹಲಿಯ ಸಂಗಮ್‌ ವಿಹಾರ್‌ ಪ್ರದೇಶದ ಅರಣ್ಯದಲ್ಲಿ ಪತ್ತೆಯಾಗಿದೆ.

ದಕ್ಷಿಣ ದೆಹಲಿಯಲ್ಲಿರುವ ಸತ್ಯಾರ್ಥಿಯವರ ನಿವಾಸದಲ್ಲಿ ಕಳೆದ ಫೆಬ್ರವರಿ 6ರ ರಾತ್ರಿ ಕಳ್ಳತನವಾಗಿ, ನೊಬೆಲ್ ಸಮ್ಮಾನ ಪತ್ರ ಹಾಗೂ ಪದಕ ಸೇರಿದಂತೆ ಹಲವು ವಸ್ತುಗಳು ಕಳವಾಗಿದ್ದವು. ಈ ಹಿನ್ನಲೆಯಲ್ಲಿ ಪ್ರಕರಣ  ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿ ಫೆಬ್ರವರಿ 12ರಂದು ಮೂವರನ್ನು ಬಂಧಿಸಿದ್ದರು. ಈ ಸಂದರ್ಭದಲ್ಲಿ ನೊಬೆಲ್‌ ಪ್ರತಿಕೃತಿ ಮತ್ತು ಕಳವಾದ ಇತರೆ ವಸ್ತುಗಳು ಪತ್ತೆಯಾಗಿದ್ದವು. ಆದರೆ ಪದಕದ ಜೊತೆ  ನೀಡಲಾಗುವ ಪತ್ರ ಮಾತ್ರ ಪತ್ತೆಯಾಗಿರಲಿಲ್ಲ. ಕಳವು ಮಾಡಿದ ವ್ಯಕ್ತಿ ನೊಬೆಲ್‌ ಪತ್ರವನ್ನು ಹಾಳೆ ಎಂದು ಭಾವಿಸಿ ಅದನ್ನು ಅರಣ್ಯದಲ್ಲಿ ಎಸೆದು ಹೋಗಿದ್ದ.

ಇದೀಗ ಆ ನೊಬೆಲ್ ಸಮ್ಮಾನ ಪತ್ರ ದೊರೆತಿದ್ದು, ಪತ್ರದೊಂದಿಗೆ ಇತರೆ ವಸ್ತುಗಳು ಕೂಡ ದೊರೆತಿದೆ. ಪೊಲೀಸರು ಅದನ್ನು ಕೈಲಾಶ್ ಸತ್ಯಾರ್ಥಿ ಅವರಿಗೆ ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ.

2014ರಲ್ಲಿ ಮಕ್ಕಳ ಹಕ್ಕುಗಳ ಹೋರಾಟಕ್ಕಾಗಿ ಕೈಲಾಶ್ ಸತ್ಯಾರ್ಥಿ ಅವರು ಪಾಕಿಸ್ತಾನದ ಮಲಾಲಾ ಯೂಸುಫ್ ಝೈ ಅವರೊಂದಿಗೆ ಜಂಟಿ ನೊಬೆಲ್ ಪಾರಿತೋಷಕ ಪಡೆದಿದ್ದರು. ಮಲಾಲಾ ಪಾಕಿಸ್ತಾನ ಬುಡುಕಟ್ಟು ಪ್ರದೇಶದಲ್ಲಿ  ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿ ಖ್ಯಾತಿ ಪಡೆದಿದ್ದರು.

SCROLL FOR NEXT