ಲಖನೌ: ಉತ್ತರ ಪ್ರದೇಶದಲ್ಲಿ ಶೇ.19ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಸಮುದಾಯದ ಶಾಸಕರ ಸಂಖ್ಯೆ ಈ ಬಾರಿ ವಿಧಾನಸಭೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 69ರಿಂದ 24ಕ್ಕೆ ಕುಸಿದಿದೆ.
2012ರ ಚುನಾವಣೆಯಲ್ಲಿ ಒಟ್ಟು 69 ಅಲ್ಪ ಸಂಖ್ಯಾತ ಶಾಸಕರು ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಕೇವಲ 24 ಶಾಸಕರು ಮಾತ್ರ ವಿಧಾನಸಭೆ ಪ್ರವೇಶಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂರು ನಿರ್ಣಾಯಕ ಮತಗಳನ್ನು ಹೊಂದಿದ್ದರೂ ಈ ಬಾರಿ ಬಿಜೆಪಿ 403 ಸ್ಥಾನಗಳ ಪೈಕಿ ಯಾರೊಬ್ಬರಿಗೆ ಟಿಕೆಟ್ ನೀಡಿರಲಿಲ್ಲ. ಪಶ್ಚಿಮ ಉತ್ತರ ಪ್ರದೇಷ ರೋಹಿಖಾಂಡ್, ತೆರೈ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಮುಸ್ಲಿಮರ, ಯಾದವ್ ಮತ್ತು ದಲಿತರ ಪ್ರಭಾವ ಹೆಚ್ಚಾಗಿದೆ. ಆದರೂ ಸಮಾಜವಾದಿ ಪಕ್ಷ, ಕಾಂಗ್ರೆಸ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಲೆಕ್ಕಾಚಾರ ಈ ಬಾರಿ ತಲೆಕೆಳಗಾಗಿದ್ದು, ಈ ಪಕ್ಷಗಳ ನಡುವೆಯೇ ಮುಸ್ಲಿಂ ಮತಗಳು ವಿಭಜನೆಯಾಗಿದ್ದರಿಂದ ಬಿಜೆಪಿ ಲಾಭವಾಗಿದೆ.