ಮನೋಹರ್ ಪರಿಕ್ಕರ್(ಸಂಗ್ರಹ ಚಿತ್ರ)
ಪಣಜಿ: ಗೋವಾದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ನಾಳೆ ಸಂಜೆ 5 ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನಗಳೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಮ್ರಿದುಲಾ ಸಿನ್ಹಾ ತಿಳಿಸಿದ್ದಾರೆ ಎಂದು ಗವರ್ನರ್ ಅವರ ಕಾರ್ಯದರ್ಶಿ ರೂಪೇಶ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಪರಿಕ್ಕರ್ 21 ಶಾಸಕರ ಬೆಂಬಲದ ಪತ್ರವನ್ನು ನೀಡಿದ್ದರು ಎಂದು ಕೂಡ ಅವರು ಹೇಳಿದ್ದಾರೆ.
13 ಶಾಸಕರನ್ನು ಹೊಂದಿರುವ ಬಿಜೆಪಿಗೆ ಗೋವಾ ಫಾರ್ವರ್ಡ್ ಪಕ್ಷದ ಮತ್ತು ಮಹಾರಾಷ್ಟ್ರವಾಡಿ ಗೋಮಂಟಕ್ ಪಕ್ಷದ ತಲಾ ಮೂವರು ಶಾಸಕರು ಹಾಗೂ ಇಬ್ಬರು ಸ್ವತಂತ್ರ ಶಾಸಕರು ಬೆಂಬಲ ನೀಡಿದ್ದಾರೆ.
ಪರಿಕ್ಕರ್ ಅವರು ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.