ದೇಶ

ಇವಿಎಂನಲ್ಲಿ ಬಿಜೆಪಿ ಗೋಲ್'ಮಾಲ್ ಆರೋಪ: ನ್ಯಾಯಾಲಯದ ಮೆಟ್ಟಿಲೇರಿದ ಮಾಯಾವತಿ

Manjula VN
ಲಖನೌ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ (ವಿದ್ಯುನ್ಮಾನ ಮತಯಂತ್ರ) ದೋಷದಿಂದಾಗಿ ಬಿಜೆಪಿ ಭಾರೀ ಗೋಲ್ ಮಾಲ್ ನಡೆಸಿದೆ ಎಂದು ಆರೋಪಿಸಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ನ್ಯಾಯಾಲಯದ ಮೆಟ್ಟಿಲೇರಲು ಬುಧವಾರ ನಿರ್ಧಾರ ಕೈಗೊಂಡಿದ್ದಾರೆ. 
ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಅಪ್ರಮಾಣಿಕ ಹಾಗೂ ಮೋಸದಿಂದ ಗೆಲವು ಸಾಧಿಸಿದೆ ಎಂದು ಹೇಳಿದ್ದಾರೆ. 
ಚುನಾವಣಾ ಆಯೋಗದ ಬಳಿ ದೂರು ದಾಖಲಿಸಿದ್ದೆವು. ಚುನಾವಣೆ ಆಯೋಗದಿಂದ ಸೂಕ್ತ ರೀತಿಯ ಪ್ರತಿಕ್ರಿಯೆಗಳು ಬಂದಿರಲಿಲ್ಲ. ದೂರು ದಾಖಲಿಸಿದ ಕೂಡಲೇ ಮಾರ್ಚ್ 11 ರಂದು ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಹೀಗಾಗಿ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಸಲುವಾಗಿ ನಾವು ನ್ಯಾಯಾಲಯ ಮೆಟ್ಟಿಲೇರಲು ನಿರ್ಧಾರ ಕೈಗೊಂಡಿದ್ದೇವೆಂದು ತಿಳಿಸಿದ್ದಾರೆ. 
ಬಿಜೆಪಿ ಮೋಸವನ್ನು ಬಹಿರಂಗಪಡಿಸುವ ಸಲುವಾಗಿ ನಮ್ಮ ಪಕ್ಷ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಉತ್ತರಪ್ರದೇಶದ ಜಿಲ್ಲಾ ಹಾಗೂ ರಾಜ್ಯದ ಪ್ರಧಾನಕಚೇರಿಗಳಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದ ದಿನದಂದೇ ಪ್ರತೀ ತಿಂಗಳ 11 ತಾರೀಖಿನಂದು ಕರಾಳ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ. 
SCROLL FOR NEXT