ಪಾಟ್ನ: ಧಾರ್ಮಿಕ ಕಾರ್ಯಕ್ರಮವೊಂದರ ವೇದಿಕೆ ಕುಸಿದು ಬಿದ್ದ ಪರಿಣಾಮ ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ.
ದಿಘಾ ಎಂಬಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಲಾಲೂ ಪ್ರಸಾದ್ ಯಾದವ್ ಅವರು ಹೋಗಿದ್ದರು. ಲಾಲೂ ಅವರೊಂದಿಗೆ ಅವರ ಪುತ್ರ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಆರೋಗ್ಯ ಸಚಿವ ತೇಜ್ ಪ್ರತಾಪ್ ಹಾಗೂ ಪುತ್ರಿ ಮಿಶಾ ಭಾರತಿ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಯಜ್ಞ ಹಾಗೂ ಪೂಜೆ ನಡೆಯುತ್ತಿದ್ದ ವೇಳೆಯೇ ವೇದಿಕೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದೆ. ಪರಿಣಾಮ ಲಾಲೂ ಪ್ರಸಾದ್ ಅವರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ವೇದಿಕೆ ಕುಸಿದುಬಿದ್ದಿದೆ ಎಂದು ಹೇಳಲಾಗುತ್ತಿದೆ.
ಕೂಡಲೇ ಲಾಲೂ ಪ್ರಸಾದ್ ಅವರನ್ನು ಐಜಿಐಎಂಎಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಲಾಲೂ ಅವರ ಬೆನ್ನಿಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.