ಮುಂಬೈ: ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ವಿಮಾನ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿರುವ ಸಂಸದ ರವೀಂದ್ರ ಗಾಯಕ್ವಾಡ್ ಅವರು, ವಿಮಾನ ಸಿಬ್ಬಂದಿಯೊಂದಿಗಿನ ಜಗಳಕ್ಕೆ ಹಿಂದಿರುವ ಸತ್ಯವನ್ನು ಮಂಗಳವಾರ ಬಾಯ್ಬಿಟ್ಟಿದ್ದಾರೆ.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಅವರು, ನಾನು ಬ್ಯುಸಿನೆಸ್ ಕ್ಲಾಸ್ ಸೀಟಿಗಾಗಿ ಆಗ್ರಹಿಸಿರಲಿಲ್ಲ. ವಿಮಾನದಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯತನವನ್ನು ನಾನು ಗಮನಿಸಿದ್ದೆ. ಕಳಪೆಮಟ್ಟದ ಸೇವೆ ಹಿನ್ನಲೆಯಲ್ಲಿ ದೂರು ನೀಡುವ ಪುಸ್ತಕವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದೆ. ದೂರು ಪುಸ್ತಕ ನೀಡುವಂತೆ ಹಲವು ಬಾರಿ ಮನವಿ ಮಾಡಿಕೊಂಡರೂ ಸಿಬ್ಬಂದಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ದೂರು ಪುಸ್ತಕ ನೀಡುವ ಬದಲು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಹೇಳಿದ್ದಾರೆ.
ನಾನು ಬ್ಯುಸಿನೆಸ್ ಸೀಟಿಗಾಗಿ ಆಗ್ರಹಿಸಿರಲಿಲ್ಲ. ಸೂಕ್ತ ರೀತಿಯ ವ್ಯವಸ್ಥೆಯನ್ನು ನೀಡುವಂತೆ ಆಗ್ರಹಿಸಿದ್ದೆ. ಲಕ್ಷಾಂತರ ಏರ್ ಇಂಡಿಯಾ ಪ್ರಯಾಣಿಕರಿಗೆ ಮೋಸ ಮಾಡುತ್ತಿದ್ದಾರೆ. ಆವರ ನಿರ್ಲಕ್ಷತನ ಹಾಗೂ ತಪ್ಪನ್ನು ಮರೆಮಾಚಲು ಬ್ಯುಸಿನೆಸ್ ಕ್ಲಾಸ್ ಸೀಟ್ ಗೆ ಆಗ್ರಹಿಸಿದ್ದೆ ಎಂದು ಹೇಳಿ ಸತ್ಯವನ್ನು ಮರೆಮಾಚುತ್ತಿದ್ದಾರೆಂದು ತಿಳಿಸಿದ್ದಾರೆ.