ಚೆನ್ನೈ: ನೀವು ಆಧಾರ್ ಕಾರ್ಡ್'ನ್ನು ಹೊಂದಿದ್ದರೆ, ಆಧಾರ್ ಜೊತೆಗೆ ಬ್ಯಾಂಕ್ ಖಾತೆಗಳು ಹಾಗೂ ಇನ್ನಿತರೆ ಸೂಕ್ಷ್ಮ ಮಾಹಿತಿಗಳನ್ನು ಜೋಡಿಸಿದ್ದರೆ ವೈಯಕ್ತಿಕ ಮಾಹಿತಿಗಳು ಸುರಕ್ಷಿತವಾಗಿಲ್ಲ ಎಂದೇ ಅರ್ಥ... ಏಕೆಂದರೆ, ಇದೇ ಮೊದಲ ಬಾರಿಗೆ ಮೋದಿ ಸರ್ಕಾರ ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿದೆ.
ಜನರು ಬಳಸುವ ಆಧಾರ್ ಕಾರ್ಡಿನ ಗೌಪ್ಯತೆಗಳು ಸೋರಿಕೆಯಾಗಿದೆ ಎಂಬ ಸಾಕಷ್ಟು ಮಾತುಗಳು ಕೇಳಿಬರುತ್ತಿದ್ದರೂ, ಸರ್ಕಾರ ಮಾತ್ರ ಈ ವರೆಗೂ ಆಧಾರ್ ಮಾಹಿತಿಗಳು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಲೇ ಬಂದಿತ್ತು. ಆದರೆ, ಇದೀಗ ಸ್ವತಃ ಕೇಂದ್ರ ಸರ್ಕಾರವೇ ಜನರ ವೈಯಕ್ತಿಕ ಮಾಹಿತಿಗಳು ಜೊತೆಗೆ ಆಧಾರ್ ಸಂಖ್ಯೆ ಮತ್ತು ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿದೆ ಎಂದು ಹೇಳಿಕೊಂಡಿದೆ.
ಈ ಬಗ್ಗೆ 'ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್' ವರದಿ ಮಾಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪತ್ರವೊಂದನ್ನು ಬರೆದಿದ್ದು, ಜನರ ಗೌಪ್ಯ ಮಾಹಿತಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿತ್ತು. ಇದೀಗ ಆ ಮಾಹಿತಿಗಳು ಅಂತರ್ಜಾಲಗಳಲ್ಲಿ ಸೋರಿಕೆಯಾಗಿದೆ ಎಂದು ಹೇಳಿಕೊಂಡಿದೆ ಎಂದು ವರದಿ ಮಾಡಲಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಜ್ಞಾನಿ ಮಾರ್ಚ್ 25 ರಂದು ಈ ಪತ್ರವನ್ನು ಬರೆದಿದ್ದು, ವಿವಿಧ ಸಚಿವಾಲಯಗಳು/ಇಲಾಖೆಗಳು ಜನರ ಬಳಿ ಸಂಗ್ರಹಿಸಿದ್ದ ಮನೆಗಳ ಕುರಿತ ಮಾಹಿತಿ, ಆಧಾರ್ ಸಂಖ್ಯೆ, ಸೂಕ್ಷ್ಮ ವೈಯಕ್ತಿಕ ಮಾಹಿತಿಗಳು ಹಾಗೂ ಬ್ಯಾಂಕ್ ಖಾತೆಗಳ ವಿವರ ಹೀಗೆ ನಾನಾ ರೀತಿಯ ಮಾಹಿತಿಗಳು ಅಂತರ್ಜಾಲಗಳಲ್ಲಿ ಸೋರಿಕೆಯಾಗಿದ್ದು, ಹುಡುಕುವವರಿಗೆ ಅಂತರ್ಜಾಲಗಳಲ್ಲಿ ಈ ಮಾಹಿತಿಗಳು ಸುಲಭವಾಗಿ ಸಿಗುವಂತಾಗಿದೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಈ ರೀತಿಯ ಮಾಹಿತಿಗಳನ್ನು ಸೋರಿಕೆ ಮಾಡಿರುವುದು ಖಂಡನೀಯ. ಇದೊಂದು ಗಂಭೀರ ಮತ್ತು ಶಿಕ್ಷಾರ್ಹ ಅಪರಾಧ ಯಾವುದೇ ವ್ಯಕ್ತಿಗೆ ಇದರಿಂದ ಹಾನಿಗೊಳಗಾದರೆ, ಅಪರಾಧವೆಸಗಿದ ವ್ಯಕ್ತಿ ಆ ವ್ಯಕ್ತಿಗೆ ದಂಡದ ರೂಪದಲ್ಲಿ ಸಂಪೂರ್ಣ ಪರಿಹಾರವನ್ನು ನೀಡಬೇಕಾಗುತ್ತದೆ. ಈ ರೀತಿಯ ಬೆಳವಣಿಗೆಗಳು ಕಂಡು ಬಂದಲ್ಲಿ ಸಚಿವಾಲಯಗಳು ಹಾಗೂ ಆಯಾ ರಾಜ್ಯ ಸರ್ಕಾರಗಳು ಕೂಡಲೇ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸೂಚನೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಮಾರ್ಚ್ 5 ರಂದಷ್ಟೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಕೇಂದ್ರ, ಆಧಾರ್ ಮಾಹಿತಿಗಳು ಸುರಕ್ಷಿತ ಹಾಗೂ ಗೌಪ್ಯವಾಗಿದೆ. ಆಧಾರ್ ಬಯೋಮೆಟ್ರಿಕ್ಸ್ ನ ಮಾಹಿತಿ ಸೋರಿಕೆ ಮತ್ತು ಆರ್ಥಿಕ ನಷ್ಟವಾಗಿದೆ ಎಂಬ ವರದಿಗಳು ಸುಳ್ಳು. ಸಹಾಯ ಧನವನ್ನು ಆಧಾರ್ ಗೆ ಜೋಡಣೆ ಮಾಡಿರುವುದಿರಂದಾಗಿ ಕಳೆದ ಎರಡುವರೆ ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ರೂ.49,000 ಕೋಟಿ ಉಳಿತಾಯವಾಗಿದೆ. ಈ ವಹಿವಾಟಿನ ಪ್ರಕ್ರಿಯೆಯಲ್ಲಿ ಬಳಕೆದಾರರ ಮಾಹಿತಿ ಕದ್ದ ಯಾವುದೇ ಪ್ರಕರಣಗಳು ನಡೆದಿಲ್ಲ, ನಷ್ಟವೂ ಉಂಟಾಗಿಲ್ಲ.
ಆಧಾರ್ ಗೆ ಸಂಬಂಧಿಸಿದಂತೆ ಪ್ರಟಕವಾಗಿರುವ ವರದಿಗಳನ್ನು ಯುಐಡಿಎಐ (ಭಾರತೀಯ ವಿಶೇಷ ಗುರುಚಿನ ಚೀಟಿ ಪ್ರಾಧಿಕಾರ) ಎಚ್ಚರಿಕೆಯಿಂದ ಪರಿಶೀಲನೆ ನಡೆಸಲಿದೆ. ಯುಐಡಿಎಐ ದತ್ತಾಂಶಕ್ಕೆ ಯಾರೂ ಮೋಸ ಮಾಡಿಲ್ಲ. ಯುಐಡಿಎಐ ವಶದಲ್ಲಿರುವ ಜನರ ವೈಯಕ್ತಿಕ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಹೀಗಾಗಿ ಯಾರೊಬ್ಬರ ಭಯ ಪಡಬೇಕಾಗಿಲ್ಲ. ಬ್ಯಾಂಕ್ ಗಳೊಂದಿಗೆ ಕೈಜೋಡಿಸಿಕೊಂಡು ವಾಣಿಜ್ಯ ವ್ಯವಹಾರ ನಡೆಸುವ ಕಂಪನಿಗಳಿಗೆ ಮಾಹಿತಿ ನೀಡುವಾಗ ಗ್ರಾಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿತ್ತು.
ಕೆಲ ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಆಧಾರ್ ಗುರುತಿನ ಸಂಖ್ಯೆಯ ನೋಂದಣಿಗೆ ನೀಡಿದ್ದ ವೈಯಕ್ತಿಕ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವುದು ಕಂಡು ಬಂದಿತ್ತು. ಇದು ಭಾರೀ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಧೋನಿ ಹಾಗೂ ಕುಟುಂಬ ಸದಸ್ಯರನ್ನು ಆಧಾರ್ ಗೆ ನೋಂದಣಿ ಮಾಡಿಸಿದ್ದ ವಿಎಲ್'ಇ ಸಂಸ್ಥೆಯ ಸಿಬ್ಬಂದಿ, ಧೋನಿ ಬೆರಳಚ್ಚು ನೀಡುತ್ತಿರುವ ಭಾವಚಿತ್ರ ಹಾಗೂ ಅರ್ಜಿಯಲ್ಲಿನ ಮಾಹಿತಿಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಧೋನಿ ಪತ್ನಿ ಸಾಕ್ಷಿ ಸಿಂಗ್ ಅವರ ಗಮನಕ್ಕೆ ತಂದಿದ್ದರು. ಈ ಕುರಿತು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಸಾಕ್ಷಿ ಸಿಂಗ್ ಅವರು ಆಧಾರ್ ಮಾಹಿತಿ ಸಾರ್ವಜನಿಕ ವಲಯದಲ್ಲಿ ಸೋರಿಕೆಯಾಗುತ್ತಿದೆ. ಇಲ್ಲಿ ಏನಾದರೂ ಗೌಪ್ಯತೆ ಉಳಿದಿದೆಯೇ? ಎಂದು ಕಿಡಿಕಾರಿದ್ದರು.
ಈ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಆಧಾರ್ ಸಂಖ್ಯೆಯ ಮಾಹಿತಿ ಸೋರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಎಲ್ಲಾ ವಹಿವಾಟುಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಹ್ಯಾಕ್ ಮಾಡದಂತೆ ತಡೆಯಲು ಏನಾದರೂ ಕ್ರಮಗಳಿವೆಯೇ?...ಪೆಂಟಗನ್ ಕಂಪ್ಯೂಟರ್ ಪ್ರೋಗ್ರಾಮ್ ಅನ್ನು ಹ್ಯಾಕ್ ಮಾಡಿದವರು ಆಧಾರ್ ಮಾಹಿತಿಯನ್ನು ಹ್ಯಾಕ್ ಮಾಡುವುದಿಲ್ಲವೆಂದು ಏನು ಖಾತರಿ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ಜನರು ಆಧಾರ್ ಇಲ್ಲದೆಯೂ ಪೆಂಟಗನ್ ಅನ್ನು ಹ್ಯಾಕ್ ಮಾಡಿದ್ದರು. ಆಧಾರ್ ಸಂಖ್ಯೆಗೂ ಹ್ಯಾಕಿಂಗ್ ಗೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.