ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿ ನ್ಯಾಯಾಂಗ ನಿಂದನೆ ಎದುರಿಸುತ್ತಿರುವ ನ್ಯಾಯಾಧೀಶ ಕರ್ಣನ್ ಅವರು ಕೊನೆಗೂ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ನ್ಯಾಯಾಂಗ ನಿಂದರೆ ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಹಾಜರಾಗಿರುವ ನ್ಯಾ. ಕರ್ಣನ್ ಅವರು ಸಿಜೆಐ ಖೇಹರ್ ನೇತೃತ್ವದ 7 ನ್ಯಾಯಮೂರ್ತಿಗಳಿದ್ದ ಪೀಠದ ಮುಂದೆ ಕೂಗಾಡಿದ್ದಾರೆಂದು ತಿಳಿದುಬಂದಿದೆ.
ನನ್ನನ್ನು ಬಂಧಿಸಿ, ಇಲ್ಲವೇ, ಬೇಕಿದ್ದರೆ ಶಿಕ್ಷಿಸಿ. ನ್ಯಾಯಾಧೀಶನಾಗಿ ಮತ್ತೆ ನನ್ನ ಕಾರ್ಯ ಮುಂದುವರೆಸಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಾನು ನನ್ನ ಕಾರ್ಯವನ್ನು ಮುಂದುವರೆಸಲು ಅವಕಾಶ ನೀಡಿದ್ದೇ ಅದರೆ, ಈ ವರೆಗೂ ನಾನು ನ್ಯಾಯಾಧೀಶರ ವಿರುದ್ಧ ಮಾಡಿದ ಜಾತಿ ತಾರತಮ್ಯ, ಭ್ರಷ್ಟಾಚಾರದಂತಹ ಆರೋಪಗಳನ್ನು ಸಾಬೀತುಪಡಿಸುತ್ತೇನೆ. ನನಗೆ ನನ್ನ ಅಧಿಕಾರ ಮರಳಿ ನೀಡದಿದ್ದರೆ, ಮುಂದಿನ ವಿಚಾರಣೆಗೆ ಯಾವುದೇ ಕಾರಣಕ್ಕೂ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಅನುಮತಿ ನೀಡದ ಸುಪ್ರೀಂಕೋರ್ಟ್ ಮತ್ತೆ ನಿಮ್ಮ ಕಾರ್ಯ ಮುಂದುವರೆಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ, ಅಲ್ಲದೆ, ನ್ಯಾಯಾಂಗ ನಿಂದನೆ ಕುರಿತಂತೆ ಕ್ಷಮೆಯಾಚಿಸುವಿರೋ ಇಲ್ಲವೇ, ಕಾನೂನು ಕ್ರಮಗಳನ್ನು ಎದುರಿಸಲು ಸಿದ್ಧರಿರುವಿರೋ ಎಂಬುದರ ಕುರಿತಂತೆ ಸ್ಪಷ್ಟನೆ ನೀಡಿ ಇನ್ನು ನಾಲ್ಕು ವಾರಗಳೊಳಗಾಗಿ ಲಿಖಿತ ಉತ್ತರ ಸಲ್ಲಿಸುವಂತೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕರ್ಣನ್ ಅವರು ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ನ ನಿವೃತ್ತ ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ವಿಚಾರಣೆಗಾಗಿ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕರ್ಣನ್ ಅವರು, ಸುಪ್ರೀಂ ಕೋರ್ಟ್ ನ ಆದೇಶಗಳು ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿವೆ. ಆದ್ದರಿಂದ 14 ಕೋಟಿ ರುಪಾಯಿಯನ್ನು ಪರಿಹಾರವಾಗಿ ನೀಡಬೇಕು. ಅಸಂವಿಧಾನಿಕ ಪೀಠ ರಚಿಸಲಾಗಿದ್ದು, ಭಾರತೀಯ ಸಂವಿಧಾನಾತ್ಮಕ ಕಾನೂನು ನಿಯಮಗಳನ್ನು ಮುರಿದು ನನ್ನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ, ನಾನು ದಲಿತ ಎಂಬ ಉದ್ದೇಶದಿಂದ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದರು.