ದೇಶ

ಉತ್ತರಪ್ರದೇಶ: ಋತುಸ್ರಾವ ಪರೀಕ್ಷಿಸಲು 70 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ವಾರ್ಡನ್!

Manjula VN
ಮುಜಾಫರ್'ನಗರ: ಋತುಸ್ರಾವದ ವೇಳೆ ಬಿದ್ದ ರಕ್ತದ ಕಲೆ ಯಾರದ್ದೆಂದು ಪತ್ತೆ ಹಚ್ಚಲು, ಮಹಿಳಾ ವಾರ್ಡನ್ ಒಬ್ಬರು 70 ವಿದ್ಯಾರ್ಥಿನಿಯರ ಬಟ್ಟೆಬಿಚ್ಚಿ ತಪಾಸಣೆ ನಡೆಸಿರುವ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಮುಜಾಫರ್ ನಗರದ ವಸತಿ ಶಾಲೆಯೊಂದರಲ್ಲಿ ನಡೆದಿದೆ. 
ಮುಜಾಫರ್'ನಗರದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಸ್ನಾನದ ಕೋಣೆಯ ಗೋಡೆಗಳ ಮೇಲೆ ಕೆಲ ದಿನಗಳ ಹಿಂದೆ ರಕ್ತದ ಕಲೆಗಳು ಆಗಿದ್ದವು. ಇದನ್ನು ಕಂಡ ವಾರ್ಡನ್ ತೀವ್ರ ಕೆಂಡಾಮಂಡಲಗೊಂಡಿದ್ದಾರೆ. ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದಾಗ ವಿದ್ಯಾರ್ಥಿನಿಯರು ಬಾಯಿ ಬಿಟ್ಟಿಲ್ಲ. 
ಹೀಗಾಗಿ ಋತುಸ್ರಾವಕ್ಕೊಳಗಾದ ಬಾಲಕಿಯರು ಯಾರು ಎಂಬುದನ್ನು ಪತ್ತೆ ಹಚ್ಚಲು ಹಾಸ್ಟೆಲ್ ನಲ್ಲಿದ್ದ ಎಲ್ಲಾ 70 ಬಾಲಕಿಯರ ಬಟ್ಟೆ ಬಿಟ್ಟಿಸಿ ತಪಾಸಣೆಮಾಡಲಾಗಿದೆ. ಘಟನೆ ಬಗ್ಗೆ ವಿದ್ಯಾರ್ಥಿನಿಯರು ಮೇಲ್ವಿಚಾರಕರ ಬಳಿ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ವಾರ್ಡನ್ ನಡೆಸಿದ ಈ ಹೇಯ ಘಟನೆ ಕುರಿತು ಎಲ್ಲೆಡೆ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು. ಈ ಹಿನ್ನಲೆಯಲ್ಲಿ ಮಹಿಳಾ ವಾರ್ಡನ್ ರನ್ನು ಅಮಾನತು ಮಾಡಲಾಗಿದೆ. 
ಇನ್ನು ಘಟನೆಗೆ ಉತ್ತರಪ್ರದೇಶ ಇಂಧನ ಸಚಿವ ಶ್ರೀಕಾಂತ್ ಶರ್ಮಾ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಸಂಬಂಧ ಪಟ್ಟಂತಹ ಅಧಿಕಾರಿಗಳು ಪ್ರಕರಣ ಸಂಬಂಧ ತನಿಖೆ ನಡೆಸಲಿದ್ದಾರೆಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿದ್ದೇನೆ. ಈಗಾಗಲೇ ಸಂಬಂಧ ಪಟ್ಟಂತಹ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತನಿಖೆ ನಡೆಸಲಿದ್ದಾರೆಂದು ಶರ್ಮಾ ಅವರು ಹೇಳಿದ್ದಾರೆ. 
ವಾರ್ಡನ್ ವರ್ತನೆ ನಮಗೆಲ್ಲರಿಗೂ ಅವಮಾನವಾಯಿತು. ವಾರ್ಡನ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆಂದು ಬಾಲಕಿಯೊಬ್ಬಳು ಹೇಳಿದ್ದಾಳೆ. 
SCROLL FOR NEXT