ಚಂಡೀಗಢ: ಪಠಾಣ್ ಕೋಟ್ ಹಾಗೂ ಗುರುದಾಸ್ಪುರ ಜಿಲ್ಲೆಗಳಲ್ಲಿ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದಾಗಿ ಶಂಕೆಗಳು ಮೂಡತೊಡಗಿದ್ದು, ಈ ಹಿನ್ನಲೆಯಲ್ಲಿ ಭಾರತೀಯ ಸೇನಾಪಡೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಬುಧವಾರ ತಿಳಿದುಬಂದಿದೆ.
ಭದ್ರತಾ ಪಡೆಗಳೊಂದಿಗೆ ಪಂಜಾಬ್ ಪೊಲೀಸರೂ ಕೂಡ ಕೈಜೋಡಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಸ್ಕಾರ್ಪಿಯೋ ಕಾರಿನಲ್ಲಿ ಕೆಲ ಅನಾಮಧೇಯ ವ್ಯಕ್ತಿಗಳು ಗುರುದಾಸ್ಪುರ ಜಿಲ್ಲೆಯ ಪೊಲೀಸರ ಆವರಣದಲ್ಲಿ ಹೋಗುತ್ತಿರುವುದಾಗಿ ಮಾಹಿತಿ ತಿಳಿದುಬಂದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾರಿನಲ್ಲಿ ಒಟ್ಟು 6 ಅನಾಮಧೇಯ ವ್ಯಕ್ತಿಗಳಿದ್ದು, ಪೊಲೀಸರ ಆವರಣದೊಳಗೆ ಪ್ರವೇಶಿಸಿದ್ದಾರೆ. ಬಳಿಕ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕಾರಿನ ನೋಂದಣಿ ಸಂಖ್ಯೆ ಕೂಡ ನಕಲಿ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಜಮ್ಮುವಿನ ವಿಜಯನಗರದಲ್ಲಿ ವ್ಯಕ್ತಿಯೊಬ್ಬರ ಬಳಿ ಈ ಕಾರನ್ನು ದರೋಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಅನುಮಾನಾಸ್ಪದ ಓಡಾಟ ಹಿನ್ನಲೆಯಲ್ಲಿ ಗುರುದಾಸ್ಪುರ ಹಾಗೂ ಪಠಾಣ್ ಕೋಟ್ ಗಡಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.