ನವದೆಹಲಿ: ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ 2 ಭಾರತೀಯ ಯೋಧ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯವೆಸಗಿರುವ ಪಾಕಿಸ್ತಾನಕ್ಕೆ ಸಮಯ ಹಾಗೂ ಸ್ಥಳ ನಿರ್ಧರಿಸಿ ದಿಟ್ಟ ಉತ್ತರವನ್ನು ನೀಡುತ್ತೇವೆಂದು ಭಾರತೀಯ ಸೇನೆ ಮಂಗಳವಾರ ಹೇಳಿದೆ.
ಸೇನಾ ಸಿಬ್ಬಂದಿಗಳ ಉಪ ಮುಖ್ಯಸ್ಥ ಶರತ್ ಚಂದ್ ಅವರು ಈ ಬಗ್ಗೆ ಮಾತನಾಡಿದ್ದು, ಯೋಧರ ಶಿರಚ್ಛೇದ ಮಾಡುವ ಮೂಲಕ ಪಾಕಿಸ್ತಾನ ಸೇನೆ ತಮ್ಮಲ್ಲಿರುವ ಹತಾಶೆಯನ್ನು ತೋರಿಸಿದೆ. ಪಾಕಿಸ್ತಾನ ಎಂದಿಗೂ ತನ್ನ ವರ್ತನೆಯನ್ನು ಸಮರ್ಥಿಸಿಕಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾವು ಏನು ಮಾಡಬೇಕೆಂಬುದನ್ನು ನಾನು ಹೇಳುವುದಿಲ್ಲ. ಹೇಳುವುದಕ್ಕಿಂತ, ನಮ್ಮ ಕ್ರಮದ ಬಗ್ಗೆ ನಾವು ಚಿಂತನೆ ನಡೆಸುತ್ತೇವೆ. ಸಮಯ ಹಾಗೂ ಸ್ಥಳವನ್ನು ಆಯ್ಕೆ ಮಾಡಿ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸುತ್ತೇವೆಂದು ತಿಳಿಸಿದ್ದಾರೆ.
ನಮ್ಮ ಸೇನಾ ಪಡೆಗಳು ಈ ರೀತಿಯ ಕೃತ್ಯಗಳನ್ನು ಎಸಗಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಹಾಗಾದರೆ, ಯಾರು ಮಾಡಿದರು?...ಅವರ ಕಡೆಯ ಜನರು ಬಂದು ಇದನ್ನು ಮಾಡಿದ್ದಾರೆಯೇ? ಪಾಕಿಸ್ತಾನ ಇದರ ಹೊಣೆಯನ್ನು ಹೊತ್ತುಕೊಂಡು ಪರಿಣಾಮವನ್ನು ಎದುರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಗಡಿಯಲ್ಲಿ ಅಪ್ರಚೋದಿತ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಅಲ್ಲದೆ, ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಯೋಧರನ್ನು ಹತ್ಯೆ ಮಾಡಿ ಶಿರಚ್ಛೇದ ಮಾಡುವ ಮೂಲಕ ಪೈಶಾಚಿಕ ಕೃತ್ಯವೆಸಗಿತ್ತು. ಪಾಕಿಸ್ತಾನ ಈ ವರ್ತನೆಗೆ ಇಡೀ ದೇಶದಾದ್ಯಂತ ಖಂಡನೆಗಳು ವ್ಯಕ್ತವಾಗತೊಡಗಿವೆ.
ಘಟನೆ ಸಂಬಂಧ ನಿನ್ನೆಯಷ್ಟೇ ಅಧಿಕಾರಿಗಳ ಬಳಿ ವರದಿ ಪಡೆದುಕೊಂಡಿದ್ದ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವರದಿ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics