ನವದೆಹಲಿ: ಯೋಧರ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯವೆಸಗಿದ್ದರೂ ತಮ್ಮದೇನೂ ಪಾತ್ರವೇ ಇಲ್ಲ ಎಂದು ಹೇಳುವ ಮೂಲಕ ಮುಗ್ಧತೆಯನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ಪಾಕಿಸ್ತಾನ ಸೇನೆಯ ಕೈವಾಡವಿಲ್ಲದೆಯೇ, ಅವರ ಸಹಾಯವಿಲ್ಲದೆಯೇ ಭಾರತೀಯ ಯೋಧರ ಶಿರಚ್ಛೇದ ಮಾಡಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು ಹೇಳಿದ್ದಾರೆ.
ನಿರಾಕರಣೆ ಮಾಡುವುದರಿಂದ ಪಾಕಿಸ್ತಾನ ವಿಶ್ವಾಸಾರ್ಹತೆಗೆ ಅರ್ಹವಲ್ಲ ಎಂಬುದನ್ನು ತೋರಿಸುತ್ತದೆ. ಏಕೆಂದರೆ, ಸ್ಥಳದಲ್ಲಿದ್ದ ವಾಸ್ತು ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗುತ್ತಿದೆ. ಯೋಧರ ಶಿರಚ್ಛೇದ ಮಾಡಿದವರಿಗೆ ಸ್ವತಃ ಪಾಕಿಸ್ತಾನ ಸೈನಿಕರೆ ಸಹಾಯ ಮಾಡಿದ್ದು, ದಾಳಿಕೋರರಿಗೆ ರಕ್ಷಣಾ ಕವಚ ನೀಡಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆಂದು ತಿಳಿಸಿದ್ದಾರೆ.
ರಕ್ಷಣೆ ಇಲ್ಲದೆಯೇ, ಈ ರೀತಿಯಾಗಿ ದಾಳಿ ಮಾಡಲು ಸಾಧ್ಯವಿಲ್ಲ. ಪಾಕಿಸ್ತಾನ ಸೇನೆ ಸ್ವತಃ ದಾಳಿಯಲ್ಲಿ ಭಾಗಿಯಾಗಿದ್ದು, ತನ್ನ ಪಾತ್ರವಿಲ್ಲ ಎಂದು ನಿರಾಕರಿಸುವಂತಿಲ್ಲ. ರಕ್ಷಣಾ ಕವಚ ಸೇನೆಯ ಬಳಿಯಿದ್ದು, ದಾಳಿಕೋರರಿಗೆ ಪಾಕಿಸ್ತಾನ ಸೇನೆಯೇ ಸಹಾಯವನ್ನು ಮಾಡಿದೆ. ಗಡಿಯಲ್ಲಿ ಅತೀ ಹೆಚ್ಚು ಭದ್ರತೆಯನ್ನು ಒದಗಿಸಲಾಗಿರುತ್ತದೆ. ಗಡಿಯಿಂದ ಕೇಲವೇ ಮೀಟರ್ ಗಳ ಅಂತರದಲ್ಲಿ ದಾಳಿ ನಡೆಸಲಾಗಿದೆ. ರಕ್ಷಣೆ ಇಲ್ಲದೆಯೇ, ಪಾಕಿಸ್ತಾನ ಸೇನೆಯ ಕೈವಾಡವಿಲ್ಲಯೇ ದಾಳಿ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ಉದ್ಧಟತನಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನಿಮ್ಮ ಸೇನೆ ಮೇಲೆ ನಂಬಿಕೆಯಿಡಿ ಎಂದು ಹೇಳಿದ್ದಾರೆ.