ವಿಜೇಂದ್ರ ಗುಪ್ತ ಅವರನ್ನು ಹೊರ ಹಾಕುತ್ತಿರುವುದು
ನವದೆಹಲಿ: ಒಂದು ದಿನದ ವಿಶೇಷ ಅಧಿವೇಶನದಲ್ಲಿ ಇವಿಎಂ(ವಿದ್ಯುನ್ಮಾನ ಮತಯಂತ್ರ)ದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದ ವೇಳೆ ಕೋಲಾಹಲ ಸೃಷ್ಟಿಸಿದ ಪ್ರತಿಪಕ್ಷದ ನಾಯಕ ವಿಜೇಂದ್ರ ಗುಪ್ತಾ ಅವರನ್ನು ಮಾರ್ಷೆಲ್ ಗಳು ಬಲವಂತವಾಗಿ ಹೊರಹಾಕಿದ ಘಟನೆ ಮಂಗಳವಾರ ನಡೆದಿದೆ.
ಚರ್ಚೆಯ ವೇಳೆ ಗದ್ದಲ ಸೃಷ್ಟಿಸುತ್ತಿದ್ದ ಬಿಜೆಪಿ ನಾಯಕನಿಗೆ ಸುಮ್ಮನಿರುವಂತೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಪದೇಪದೆ ಸೂಚಿಸಿದರೂ ಸುಮ್ಮನಾಗದ ಗುಪ್ತಾ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ, ಸದನದಿಂದ ಹೊರ ಹಾಕಲಾಗಿದೆ.
ಕಲಾಪ ಆರಂಭವಾಗುತ್ತಿದ್ದಂತೆ ಇವಿಎಂ ವಿಷಯ ಪ್ರಸ್ತಾಪಿಸಿದ ಆಪ್ ಶಾಸಕಿ ಆಲ್ಕಾ ಲಾಂಬಾ ಅವರು, ಇವಿಎಂಗಳ ಬಗ್ಗೆ ತಿಳಿದುಕೊಳ್ಳುವ ಅಧಿಕಾರ ಸಾರ್ವಜನಿಕರಿಗೆ ಇದೆ. ಹಾಗಾಗಿ ಇವಿಎಂ ಹೇಗೆ ತಿರುಚಲಾಗುತ್ತದೆ ಎಂಬುದನ್ನು ಸದನದಲ್ಲಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗುತ್ತದೆ ಎಂದು ಪ್ರಸ್ತಾಪಿಸಿದರು. ಬಳಿಕ ಇವಿಎಂ ಅನ್ನು ಹೇಗೆ ತಿರುಚಬಹುದು ಎಂಬ ಬಗ್ಗೆ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ವಿಧಾನಸಭೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು.
ಈ ವೇಳೆ ಬಿಜೆಪಿ ಶಾಸಕ ವಿಜೇಂದ್ರ ಗುಪ್ತಾ ಅವರು ತೀವ್ರ ಕೋಲಾಹಲ ಎಬ್ಬಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಮಾರ್ಷಲ್ಸ್ ಗಳನ್ನು ಕರೆಯಿಸಿ ಸದನದಿಂದ ಹೊರ ಕಳುಹಿಸಿದ್ದಾರೆ.
ಆಪ್ ಶಾಸಕರು ಇವಿಎಂ ಬಗ್ಗೆ ಪ್ರಸ್ತಾವಿಸುತ್ತಿದ್ದಂತೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಗುಪ್ತಾ, ಆಪ್ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದರು. ಸತ್ಯೇಂದ್ರ ಜೈನ್ ಶಾಮೀಲಾಗಿರುವ ವಿವಾದಿತ ಭೂ ವ್ಯವಹಾರದ ಬಗ್ಗೆ ಗುಪ್ತಾ ಪ್ರಶ್ನಿಸಿದ್ದರು. ಆದರೆ ಸ್ಪೀಕರ್ ಅವರು ಬಿಜೆಪಿ ಶಾಸಕರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಆದರೆ ಗುಪ್ತಾ ಅವರು ತಮ್ಮ ಮಾತನ್ನು ಮುಂದುವರಿಸಿದ್ದರು.