ದೇಶ

ಕಾಗ್ನಿಜಂಟ್ ಉದ್ಯೋಗಿಗಳ ವಜಾ: ತೆಲಂಗಾಣ ಕಾರ್ಮಿಕ ಇಲಾಖೆ ಮೊರೆ ಹೋದ ನೌಕರರು

Srinivas Rao BV
ಹೈದರಾಬಾದ್: ಕಾಗ್ನಿಜಂಟ್ ಟೆಕ್ನಾಲಜಿ ಸಲ್ಯೂಷನ್ಸ್(ಸಿಟಿಎಸ್) ವಿರುದ್ಧ ಅಕ್ರಮವಾಗಿ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಆರೋಪ ಮಾಡಿರುವ ಸಂಸ್ಥೆಯ ಉದ್ಯೋಗಿಗಳು ಹಾಗೂ ಐಟಿ ನೌಕರರ ವೇದಿಕೆ(ಎಫ್ ಐಟಿಇ) ಪ್ರತಿನಿಧಿಗಳು ತೆಲಂಗಾಣ ಕಾರ್ಮಿಕ ಇಲಾಖೆ ಮೊರೆ ಹೋಗಿದ್ದಾರೆ. 
"ಇತ್ತೀಚಿನ ದಿನಗಳಲ್ಲಿ ಐಟಿ ಕಂಪನಿಗಳು ಲಾಭದ ಉದ್ದೇಶದಿಂದ ಹೆಚ್ಚು ವೇತನ ಪಡೆಯುತ್ತಿರುವ ಉದ್ಯೋಗಿಗಳನ್ನು ವಜಾಗೊಳಿಸಿ ಕಡಿಮೆ ವೇತನ ಪಡೆಯುವ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಅಕ್ರಮ ವಜಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಟಿಎಸ್ ಸಂಸ್ಥೆಯ ಉದ್ಯೋಗಿಗಳು ಹೇಳಿದ್ದಾರೆ. 
ಪ್ರತಿಯೊಂದು ಸಂಸ್ಥೆಯೂ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಕ್ಕೆ ಒಂದೊಂದು ಕಾರಣ ನೀಡುತ್ತಿದ್ದು, ಸಿಟಿಎಸ್ ಸಾವಿರಾರು ಮಂದಿ ಉದ್ಯೋಗಿಗಳನ್ನು ಅಕ್ರಮವಾಗಿ ವಜಾಗೊಳಿಸುತ್ತಿದ್ದು, ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದೆ. ಇದರಿಂದಾಗಿ ಸಮಸ್ಯೆ ಎದುರಿಸುತ್ತಿರುವವರು ಕೇವಲ ಕೆಲವು ಸಾವಿರ ಜನರಲ್ಲ, ಸಾವಿರಾರು ಕುಟುಂಬಗಲು ಎಂದು ಉದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 
ಈ ಹಿನ್ನೆಲೆಯಲ್ಲಿ ಐಟಿ ನೌಕರರ ವೇದಿಕೆ ಪ್ರತಿನಿಧಿಗಳು ತೆಲಂಗಾಣ ಕಾರ್ಮಿಕ ಇಲಾಖೆ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲಾಖೆಯ ತೆಲಂಗಾಣದ ರಂಗಾರೆಡ್ಡಿ ವಿಭಾಗದ ಜಂಟಿ ಆಯುಕ್ತ ಆರ್ ಚಂದ್ರಶೇಖರ್, ಸಿಟಿಎಸ್ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ತಿಳಿದುಕೊಳ್ಳುತ್ತೇವೆ. ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ. 
SCROLL FOR NEXT