ನವದೆಹಲಿ: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಜೀವಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ಭಾರತ ಅಂತರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ.
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದೇವೆ. ಜಾಧವ್ ಭೇಟಿಗೆ ವಕೀಲರಿಗೆ ಅವಕಾಶ ನೀಡುವಂತೆ ಭಾರತ 16 ಬಾರಿ ಮನವಿ ಮಾಡಿದೆ. ಆದರೆ ಭಾರತದ ಮನವಿಗೆ ಪಾಕಿಸ್ತಾನ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ವಿದೇಶಾಂಗ ಸಚಿವಲಾಯದ ವಕ್ತಾರ ಗೋಪಾಲ್ ಬಗ್ಲಾಯ್ ಅವರು ಹೇಳಿದ್ದಾರೆ.
ಗೂಢಚಾರಿಕೆ ಮಾಡಿದ ಆರೋಪದ ಮೇಲೆ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಿರುವ ಪಾಕ್ ಸೇನಾ ಕೋರ್ಟ್ ಆದೇಶದ ವಿರುದ್ಧ ಅವರ ಕುಟುಂಬ ಮೇಲ್ಮನವಿ ಸಲ್ಲಿಸಿರುವ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ ಎಂದು ಬಗ್ಲಾಯ್ ತಿಳಿಸಿದ್ದಾರೆ.
ಜಾಧವ್ ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕಾಗಿ ಅವರ ಕುಟುಂಬಕ್ಕೆ ವೀಸಾ ನೀಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಏಪ್ರಿಲ್ 27ರಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝಿಜ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಬಗ್ಲಾಯ್ ತಿಳಿಸಿದ್ದಾರೆ.
ಜಾಧವ್ ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಭಾರತ ಸಲ್ಲಿಸಿದ್ದ ಮನವಿಯನ್ನು ಅಂತರಾಷ್ಟ್ರೀಯ ಕೋರ್ಟ್ ಪುರಷ್ಕರಿಸಿ ನಿನ್ನೆ ತಡೆಯಾಜ್ಞೆ ವಿಧಿಸಿದೆ.