ದೇಶ

ಜಾಧವ್ ಗಲ್ಲು ಶಿಕ್ಷೆಗೆ ತಡೆ: ಸುಷ್ಮಾ ಸ್ವರಾಜ್ ಕೊಂಡಾಡಿದ ವಿದೇಶಾಂಗ ಸಚಿವಾಲಯ

Manjula VN
ನವದೆಹಲಿ: ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್'ಗೆ ಪಾಕಿಸ್ತಾನ ನೀಡಿದ್ದ ಗಲ್ಲುಶಿಕ್ಷೆಗೆ ಅಂತರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಹಿನ್ನಲೆಯಲ್ಲಿ ವಿದೇಶಾಂಗ ಸಚಿವಾಲಯ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೊಂಡಾಡಿದೆ. 
ಜಾಧವ್ ಪ್ರಕರಣ ಸಂಬಂಧ ಅಂತರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪು ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ. ಸಿಂಗ್ ಅವರು, ಜಾಧವ್ ಪ್ರಕರಣ ಸಂಬಂಧ ಸುಷ್ಮಾ ಸ್ವರಾಜ್ ಅವರು ತೆಗೆದುಕೊಂಡಿದ್ದ ಕಾನೂನು ಕ್ರಮವನ್ನು ಹೊಗಳಿದ್ದಾರೆ. 
ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶ ಭಾರತ ಎಂದಿಗೂ ಸರಿಯಿದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಕುಲ್ ಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ಪಾಕಿಸ್ತಾನ ಅನಗತ್ಯವಾಗಿ ರಾಜಕೀಯ ಮಾಡುತ್ತಿದೆ. ಸುಷ್ಮಾ ಸ್ವರಾಜ್ ಅವರು ಪ್ರಕರಣ ಸಂಬಂಧ ವಿಶೇಷವಾಗಿ ಗಮನ ಹರಿಸಿದ್ದರಿಂದಾಗಿ ಪಾಕಿಸ್ತಾನಕ್ಕೆ ಹಿನ್ನಡೆಯುಂಟಾಗಿದೆ. 
ಅಂತರಾಷ್ಟ್ರೀಯ ನ್ಯಾಯಾಲಯ ಈ ರೀತಿಯ ಆದೇಶ ನೀಡಿದ್ದಕ್ಕಾಗಿ ಮೊದಲು ನಾವು ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಹೇಳಬೇಕಾಗಿದೆ. ಜಾಧವ್ ಪ್ರಕರಣ ಸಂಬಂಧ ವಿಶೇಷ ಆಸಕ್ತಿವಹಿಸಿ ಕಾನೂನು ತಜ್ಞರನ್ನು ಕರೆದು ಕಾನೂನು ಸಲಹೆಗಳನ್ನು ಪಡೆದುಕೊಂಡಿದ್ದರು. ಕಾನೂನು ತಜ್ಞರ ಸಲಹೆ ಮೇರೆಗೆ ನಾವು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದೆವು. ಇದೀಗ ನಮ್ಮ ನಿಲುವು ಸರಿಯಿದೆ ಎಂದು ನ್ಯಾಯಾಲಯ ಕೂಡ ಅಭಿಪ್ರಾಯಪಟ್ಟಿದೆ ಎಂದು ತಿಳಿಸಿದ್ದಾರೆ. 
SCROLL FOR NEXT