ದೇಶ

ಜೆಎನ್ ಯು ವಿದ್ಯಾರ್ಥಿ ನಜೀಬ್ ನಾಪತ್ತೆ; ಪೊಲೀಸ್ ತನಿಖೆ ಕುರಿತಂತೆ ದೆಹಲಿ ಹೈಕೋರ್ಟ್ ಅಸಮಾಧಾನ!

Srinivasamurthy VN

ನವದೆಹಲಿ: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ದೆಹಲಿ ಜೆಎನ್ ಯು ವಿದ್ಯಾರ್ಥಿ ನಜೀಬ್ ನಾಪತ್ತೆ ಪ್ರಕರಣ ಸಂಬಂಧ ಪೊಲೀಸರ ತನಿಖೆ ಸರಿಯಾದ ಮಾರ್ಗದಲ್ಲಿ ನಡೆದಿಲ್ಲ ಎಂದು ದೆಹಲಿ ಹೈಕೋರ್ಟ್ ಅಸಮಾಧಾನ  ವ್ಯಕ್ತಪಡಿಸಿದೆ.

ಇಂದು ನಡೆದ ವಿಚಾರಣೆಯಲ್ಲಿ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಪೊಲೀಸರು ಪ್ರಕರಣದ ಮುಜುಗರದಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು  ನಿಭಾಯಿಸಿದ ರೀತಿ ಸರಿಯಾಗಿಲ್ಲ. ಅಸಲಿಗೆ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಹೇಳಿದೆ. "ದೆಹಲಿ ಪೊಲೀಸರು ತನಿಖೆ ನಡೆಸುತ್ತಿರುವ ರೀತಿಯನ್ನು ನೋಡಿದರೆ ಅವರು ಪ್ರಕರಣವನ್ನು ದೊಡ್ಡ ಸೆನ್ಸೇಶನ್ ಮಾಡಲು  ಹೊರಟಿದ್ದಾರೆಂದು ಅನಿಸುತ್ತಿದೆ". ನಾಪತ್ತೆಯಾದ ವಿದ್ಯಾರ್ಥಿಯ ಲ್ಯಾಪ್ ಟಾಪ್ ಮತ್ತು ಕರೆ ವಿವರಗಳ ಫೊರೆನ್ಸಿಕ್ ವರದಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸೀಲ್ ಮಾಡಲ್ಪಟ್ಟ ಕವರಿನಲ್ಲಿ ಸಲ್ಲಿಸಿದ್ದರೂ ಆರಂಭದಲ್ಲಿ ಸ್ವತ:  ತಮ್ಮ ವಕೀಲರ ಬಳಿ ಪೊಲೀಸರು ಇದರ ವಿವರಗಳನ್ನು ನೀಡದೇ ಇರುವ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿ ದೇಶಾದ್ಯಂತ ನಾಪತ್ತೆಯಾದ ವಿದ್ಯಾರ್ಥಿಯ ಪತ್ತೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಆತನ ನಾಪತ್ತೆಗೆ ಕಾರಣರಾಗಿದ್ದಾರೆಂದು ಶಂಕಿಸಲಾದ ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು  ಆರಂಭದಲ್ಲಿಯೇ ಪೊಲೀಸರು ಪ್ರಶ್ನಿಸಿಲ್ಲ. ಕನಿಷ್ಠ ಫಕ್ಷ ಅವರನ್ನು ವಶಕ್ಕೆ ತೆಗೆದುಕೊಳ್ಳದೇ ಇರುವುದಕ್ಕೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಇನ್ನು ವಿಚಾರಣೆ ವೇಳೆ ಡಿಸಿಪಿ ರಾಮಗೋಪಾಲ್ ನಾಯ್ಕಿ ತಾವು ಈ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾಗಿಯೂ ಶಂಕಿತ ವಿದ್ಯಾರ್ಥಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿಲ್ಲದೇ ಇರುವುದರಿಂದ ಅವರ ಮೊಬೈಲ್  ಫೋನುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಶಂಕಿತ ವಿದ್ಯಾರ್ಥಿಗಳು ನಜೀಬ್ ನಾಪತ್ತೆಯಾಗುವ ಮುನ್ನಾ ದಿನ ಆತನ ಮೇಲೆ ಹಲ್ಲೆ ನಡೆಸಿದ್ದರೆಂದು  ಆಪಾದಿಸಲಾಗಿರುವಾಗ ಅವರ ಮೊಬೈಲ್ ಫೋನುಗಳ ತಪಾಸಣೆ ಸರಿಯಾದ ಕ್ರಮವಾಗಿರುತ್ತಿತ್ತು. ಆದರೆ ಇದನ್ನು ಪೊಲೀಸರು ಮಾಡಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಇದಲ್ಲದೆ ಪೊಲೀಸರು ತಮ್ಮ ಪರವಾಗಿ ವಾದಿಸುತ್ತಿರುವ ವಕೀಲರಿಗೇ ಸಾಕಷ್ಟು ವಿಚಾರಗಳನ್ನು ಹೇಳಿಲ್ಲ. ಅಂದ ಮೇಲೆ ಪ್ರಕರಣದಲ್ಲಿ ಸಾಕಷ್ಟು ಗಂಭೀರ ವಿಚಾರಗಳನ್ನು ಮರೆಮಾಚಿರುವ ಸಾಧ್ಯತೆಗಳಿರುವ ಕುರಿತು ಶಂಕೆ  ಮೂಡುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಕಳೆದ 2016 ಅಕ್ಟೋಬರ್ 14ರಂದು ಜೆಎನ್ ಯು ವಿದ್ಯಾರ್ಥಿ ನಜೀಬ್ ಹಾಗೂ ಎಬಿವಿಪಿ ಕಾರ್ಯಕರ್ತರೊಂದಿಗೆ ಜಗಳವಾಗಿತ್ತು, ಆ ಜಗಳ ಬಳಿಕ ನಜೀಬ್ ನಾಪತ್ತೆಯಾಗಿದ್ದ. ಹೀಗಾಗಿ ಆರ್ ಎಸ್ ಎಸ್ ಬೆಂಬಲದ ಎಬಿವಿಪಿ  ಸಂಘಟನೆ ಕಾರ್ಯಕರ್ತರ ಮೇಲೆ ಪೊಲೀಸರು ಅನುಮಾನದ ಆಧಾರದ ಮೇರೆಗೆ ಪ್ರಕರಣ ದಾಖಲಿಸಿದ್ದರು.

SCROLL FOR NEXT