ದೇಶ

ಜಾಧವ್ ಆರೋಗ್ಯ ಸ್ಥಿತಿ ಬಗ್ಗೆ ಪಾಕ್ ನಿಂದ ಯಾವುದೇ ಮಾಹಿತಿ ಇಲ್ಲ: ಭಾರತ

Lingaraj Badiger
ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಅಂತರಾಷ್ಟ್ರೀಯ ಕೋರ್ಟ್ ತಡೆ ನೀಡಿರುವುದರಿಂದ ಭಾರತ ಸ್ವಲ್ಪ ನಿರಾಳವಾಗಿದೆ. ಆದರೆ ಜಾಧವ್ ಎಲ್ಲಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಪಾಕಿಸ್ತಾನ ಯಾವುದೇ ಮಾಹಿತಿ ನೀಡದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ನಿನ್ನೆಯಷ್ಟೇ 46 ವರ್ಷದ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಅಂತರಾಷ್ಟ್ರೀಯ ಕೋರ್ಟ್ ತಡೆ ನೀಡಿದೆ. ಆದರೆ ಅವರ ಆರೋಗ್ಯದ ಸ್ಥಿತಿ ಬಗ್ಗೆ ಇಂದಿನವರೆಗೂ ಪಾಕಿಸ್ತಾನ ಯಾವುದೇ ಮಾಹಿತಿ ನೀಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲಾಯ್ ಅವರು ಹೇಳಿದ್ದಾರೆ.
ಜಾಧವ್ ಇರುವ ಸ್ಥಳದ ಬಗ್ಗೆ ಪಾಕಿಸ್ತಾನ ಮಾಹಿತಿ ನೀಡಿದೆಯಾ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಬಗ್ಲಾಯ್ ಅವರು, ಈ ಕ್ಷಣದವರೆಗೂ ಪಾಕಿಸ್ತಾನ ಜಾಧವ್ ಆರೋಗ್ಯ ಸ್ಥಿತಿಯ ಬಗ್ಗೆಯಾಗಲಿ ಅಥವಾ ಅವರು ಇರುವ ಸ್ಥಳದ ಬಗ್ಗೆಯಾಗಲಿ ಯಾವುದೇ ನೀಡಿಲ್ಲ ಎಂದರು.
ಕಳೆದ ತಿಂಗಳು ಕುಲಭೂಷಣ್ ಜಾಧವ್ ಆರೋಗ್ಯದ ಬಗ್ಗೆ ವರದಿ ನೀಡುವಂತೆ ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಆದರೆ ಇದುವರೆಗೂ ವರದಿ ನೀಡದಿರುವುದು ದುರದೃಷ್ಟಕರ ಎಂದು ಬಗ್ಲಾಯ್ ಹೇಳಿದ್ದಾರೆ.
SCROLL FOR NEXT