ರೊಹ್ಟಕ್; ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ 5 ತಿಂಗಳ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಗೆ ಶುಕ್ರವಾರ ಗರ್ಭಪಾತ ಮಾಡಿಸಲಾಗಿದೆ.
ವಿಷಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ವೈದ್ಯಕೀಯ ಮಂಡಳಿಗೆ ಅನುಮತಿ ನೀಡಿದ್ದ ರೊಹ್ಟಕ್ ಜಿಲ್ಲಾ ನ್ಯಾಯಾಲಯ ತೀರ್ಪಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಗರ್ಭಪಾತದ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಲಕಿ ಈಗ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಪದವಿ ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.
ಬಾಲಕಿಯ ಮಲತಂದೆಯೇ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಮಾಡುವ ಮೂಲಕ ಆಕೆ ಗರ್ಭ ಧರಿಸುವಂತೆ ಮಾಡಿದ್ದ, ಕೆಲ ದಿನಗಳ ಹಿಂದಷ್ಟೇ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಆಕೆಯ ತಾಯಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾಗ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.