ಮಧ್ಯ ಪ್ರದೇಶದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಬಸ್, ಎರಡನೇ ಚಿತ್ರದಲ್ಲಿ ಮುಂಬೈಯಲ್ಲಿ ಬಸ್ ಮಗುಚಿ ಸಂಭವಿಸಿದ ಅಪಘಾತ
ಜಬಲ್ಪುರ್(ಮಧ್ಯ ಪ್ರದೇಶ): ಮಧ್ಯ ಪ್ರದೇಶದ ದಿಂಡೊರಿ ಜಿಲ್ಲೆಯಲ್ಲಿ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಮಗುಚಿ ಬಿದ್ದು 6 ಮಂದಿ ಯಾತ್ರಿಕರು ಮೃತಪಟ್ಟು 28 ಮಂದಿ ಗಾಯಗೊಂಡ ಘಟನೆ ನಿನ್ನೆ ನಡೆದಿದೆ.
ಕಳೆದ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಸುಮಾರು 40 ಮಂದಿ ಯಾತ್ರಿಕರು ಜಬಲ್ಪುರದಿಂದ ಅಮರ್ಕಂಟಕ್ ಗೆ ತೆರಳುತ್ತಿದ್ದರು. ಜೊಗಿ ತಿಕಾರಿಯಾ ಗ್ರಾಮದ ಹತ್ತಿರ ಘಾಟ್ ಸೆಕ್ಷನ್ ನಲ್ಲಿ ಬಸ್ಸನ್ನು ಚಲಾಯಿಸುತ್ತಿದ್ದ ಚಾಲಕ ಮಂಪರು ಬಂದಂತಾಗಿ ನಿಯಂತ್ರಣ ಕಳೆದುಕೊಂಡಾಗ ಕಂದಕಕ್ಕೆ ಬಿದ್ದಿದೆ.
ವರದಿ ಪ್ರಕಾರ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರು. ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡವರಲ್ಲಿ 7 ಮಂದಿಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಮಧ್ಯೆ, ಕೇಂದ್ರ ಸಚಿವ ಓಂ ಪ್ರಕಾಶ್ ದುರ್ವೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟವರ ಕುಟುಂಬದವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇನ್ನೊಂದೆಡೆ ಮುಂಬೈಯ ದಾದರ್ ಪ್ರದೇಶದಲ್ಲಿ ಬಸ್ ಮಗುಚಿ ಬಿದ್ದು ಓರ್ವ ಮೃತಪಟ್ಟು, 34 ಮಂದಿ ಗಾಯಗೊಂಡಿದ್ದಾರೆ.