ಫಾರೂಖ್ ಅಹ್ಮದ್ ದಾರ್ ನನ್ನು ಜೀಪ್ ಗೆ ಕಟ್ಟಿ ಎಳೆಯುತ್ತಿರುವುದು
ನವದೆಹಲಿ: ವ್ಯಕ್ತಿಯೊಬ್ಬರನ್ನು ಸೇನಾ ಜೀಪ್ ಗೆ ಕಟ್ಟಿ ಸುಮಾರು 28 ಕಿ.ಮೀ. ಎಳೆದೊಯ್ಯುವುದು ಒಂದು ದೊಡ್ಡ ಸಾಹಸವೇ ಎಂದು ಸಂತ್ರಸ್ಥ ಕಾಶ್ಮೀರಿ ಯುವಕ ಫಾರುಖ್ ಅಹ್ಮದ್ ದಾರ್ ಮಂಗಳವಾರ ಪ್ರಶ್ನಿಸಿದ್ದಾನೆ.
ಯುವಕನ್ನು ಜೀಪಿಗೆ ಕಟ್ಟಿದ ಪ್ರಕರಣದ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿರುವಾಗಲೇ, ಸೇನೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಲ್ಪಟ್ಟ ಯುವಕ ಫರೂಖ್ ಧರ್ ನಾನೇನು ಪ್ರಾಣಿಯೇ? ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ ಘಟನೆ ಕುರಿತು ನಡೆದ ಸೇನಾ ನ್ಯಾಯಾಲಯದ ತನಿಖೆ ಒಂದು ಕಣ್ಣೋರೆಸುವ ತಂತ್ರ ಅಷ್ಟೆ ಎಂದಿದ್ದಾರೆ.
ನಾನು ಕೇಳುವ ಒಂದೇ ಒಂದು ಪ್ರಶ್ನೆ ಎಂದರೆ, ಈ ರೀತಿ ಜೀಪಿನ ಮುಂಭಾಗಕ್ಕೆ ಕಟ್ಟಿ ಪ್ರದರ್ಶನಕ್ಕಿರಿಸಲು ನಾನೇನು ಪ್ರಾಣಿಯಾ? ನಾನೇನು ಕೋಣ ಅಥವಾ ಎಮ್ಮೆ ಆಗಿದ್ದೆನೆ? ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರೆ.
ಮಧ್ಯ ಕಾಶ್ಮೀರದ ಬುದ್‍ಗಾಂ ಜಿಲ್ಲೆಯವನಾದ ಫರೂಖ್ ಧರ್ ಎಂಬ ಯುವಕನನ್ನು ಏಪ್ರಿಲ್ ತಿಂಗಳಲ್ಲಿ ಕಾಶ್ಮೀರ ಚುನಾವಣೆ ವೇಳೆ ಸೇನಾ ಜೀಪಿನ ಮುಂಭಾಗಕ್ಕೆ ಕಟ್ಟಿ ಕಲ್ಲು ತೂರಾಟ ತಡೆಯಲು ಮಾನವ ಗುರಾಣಿಯಾಗಿ ಬಳಸಲಾಗಿತ್ತು.
ಈ ಮಧ್ಯೆ ಯುವಕನ್ನು ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ್ದ ಮೇಜರ್ ಲೀತುಲ್ ಗೊಗೊಯಿ ಅವರಿಗೆ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.