ಕಲ್ಲುತೂರಾಟಗಾರನನ್ನು ಸೇನಾ ಜೀಪಿಗೆ ಕಟ್ಟಿರುವುದು
ಶ್ರೀನಗರ: ಕಲ್ಲುತೂರಾಟಗಾರನನ್ನು ಸೇನೆಯ ಜೀಪೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿಕೊಂಡ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರತ್ಯೇಕತಾವಾದಿಗಳು ಶಾಂತಿಯುತ ಪ್ರತಿಭಟನೆಗೆ ಗುರುವಾರ ಕರೆ ನೀಡಿದ್ದಾರೆ.
ಕಲ್ಲು ತೂರಾಟಗಾರರಿಂದ ರಕ್ಷಿಸಿಕೊಳ್ಳುವ ಸಲುವಾಗಿ ವ್ಯಕ್ತಿಯನ್ನು ಮಾನವ ಗುರಾಣಿಯಾಗಿ ಬಳಸಿಕೊಂಡಿರುವುದು ಅಮಾನವೀಯ ಕೃತ್ಯ ಹಾಗೂ ಇಂತಹ ಕೃತ್ಯಕ್ಕೆ ಗೌರವ ನೀಡುವುದು ಸರಿಯಲ್ಲ ಎಂದು ಹೇಳಿರುವ ಮೂರು ಪ್ರಮುಖ ಪ್ರತ್ಯೇಕತಾವಾದಿಗಳ ತಂಡಗಳು ಪ್ರತಿಭಟನೆ ನಡೆಸಲು ಕರೆ ನೀಡಿವೆ.
ಕಲ್ಲು ತೂರಾಟದಿಂದ ರಕ್ಷಣೆ ಪಡೆಯುವ ಸಲುವಾಗಿ ಫಾರೂಕ್ ಅಹ್ಮದ್ ಧರ್ ಎಂಬುವವರನ್ನು ಮೇಜರ್ ಲೀತುಲ್ ಗೊಗೊಯಿ ಅವರು ಸೇನೆಯ ಜೀಪಿಗೆ ಕಟ್ಟಿ ಬದ್ಗಾಂ ಜಿಲ್ಲೆಯ ಹಳ್ಳಿಗಳಲ್ಲಿ ಏ.19ರಂದು ಮೆರವಣಿಗೆ ಮಾಡಿದ್ದರು. ಇದಕ್ಕೆ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಪ್ರಕರಣ ಸಂಬಂಧ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ಕ್ರಮವನ್ನು ಲೀತುಲ್ ಗೊಗೊಯಿಯವರು ಸಮರ್ಥಿಸಿಕೊಂಡಿದ್ದರು. ನನ್ನ ಈ ಕ್ರಮ ಹಲವು ಅರೆ ಸೇನಾ ಪಡೆಗಳು, ಚುನಾವಣಾ ಸಿಬ್ಬಂದಿಗಳು ಹಾಗೂ ಜನರ ಪ್ರಾಣಗಳನ್ನು ಉಳಿಸಿತ್ತು. ಒಂದು ವೇಳೆ ನಾನು ಈ ರೀತಿಯ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ ಗುಂಡಿನ ದಾಳಿ ನಡೆಸುವಂತೆ ಆದೇಶ ನೀಡಬೇಕಿತ್ತು. ಇದರಿಂದ ಸಾಕಷ್ಟು ಸಮಸ್ಯೆಗಳು, ಪ್ರಾಣಹಾನಿಗಳು ಎದುರಾಗುತ್ತಿತ್ತು ಎಂದು ಹೇಳಿದ್ದರು.